ಕೈಕಂಬ: ಮುತ್ತೂರು ಬೆಜ್ಜೆ ಬಂಜನ್ ಗೋತ್ರದ ಕುಟುಂಬ ಮೂಲಸ್ಥಾನದಲ್ಲಿ ಪ್ರಕೃತಿ ಆರಾಧನೆ ಹಾಗೂ ಸಂಪ್ರದಾಯದ ಪ್ರತೀಕವಾದ ನಾಗರ ಪಂಚಮಿ ಹಬ್ಬವನ್ನು ಇಂದು ಅತ್ಯಂತ ಶ್ರದ್ಧಾ ಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು.


ಮೂಲಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಹಾಗೂ ಯಜಮಾನರು, ಆಡಳಿತ ಸಮಿತಿ ಪದಾಧಿಕಾರಿಗಳು, ಪರಿಚಾರಕರು, ಹಿರಿಯರು, ಕುಟುಂಬ ಸದಸ್ಯರು ಹಾಗೂ ಸ್ಥಳೀಯ ಭಕ್ತಾಧಿಗಳ ಉಪಸ್ಥಿತಿಯಲ್ಲಿ ಶ್ರೀ ನಾಗ ಮತ್ತು ನಾಗಬ್ರಹ್ಮ ದೇವರಿಗೆ ತನು ತರ್ಪಣ ಹಾಗೂ ಪ್ರಾರ್ಥನೆಗಳು ವಿಧಿವತ್ತಾಗಿ ಜರುಗಿದವು.

ವಿವಿಧೆಡೆಯಿಂದ ಆಗಮಿಸಿದ್ದ ಗೋತ್ರದ ಬಾಂಧವರು ಹಾಗೂ ನೂರಾರು ಭಕ್ತರು ನಾಗಬನದಲ್ಲಿ ಜಮಾಯಿಸಿ, ನಾಗದೇವರಿಗೆ ತನು ಸಮರ್ಪಿಸಿ ಕೃತಾರ್ಥರಾದರು. ಬಳಿಕ ಸಿಂಹ ಸಂಕ್ರಮಣ ಪ್ರಯುಕ್ತ ಪರಿವಾರ ದೈವಗಳಿಗೆ ಸಂಕ್ರಾಂತಿ ಸೇವೆ ನಡೆಯಿತು.

ಸನ್ಮಾನ
ರಾಜ್ಯ ಉಪನ್ಯಾಸಕರ ಸಂಘದ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ವಿಠಲ ಎ. ಅವರಿಗೆ ಅವರಿಗೆ ಸಮಿತಿ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ನಾಗರ ಪಂಚಮಿಯ ಧಾರ್ಮಿಕ ವಿಧಿವಿಧಾನಗಳ ಮುಕ್ತಾಯದ ಬಳಿಕ ಬೆಜ್ಜೆ ಮನೆಯಲ್ಲಿ ಜಮಾಯಿಸಿದ್ದ ನೂರಾರು ಭಕ್ತರಿಗೆ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಯಜಮಾನರಾದ ಶೀನ ಟೈಲರ್ ಅಲ್ಲಿಪಾದೆ, ಪ್ರಮುಖರಾದ ಜಗದೀಶ್ ಕುಪ್ಪೆಪದವು, ಚಂದ್ರಶೇಖರ ಮಂಗಳೂರು, ಪದ್ಮನಾಭ ಕುತ್ತಾರ್, ದೈವಗಳ ಪರಿಚಾರಕರಾದ ಪ್ರದೀಪ್ ತಾಪರಿಪಡ್ಪು, ಸಂತೋಷ್, ಮತ್ತು ಸೀತಾರಾಮ ಕುಲಾಲ್, ಮುತ್ತಪ್ಪ ಮೂಲ್ಯ ಕುದ್ಕೋಳಿ ಪಲ್ಕೆ ಸೇರಿದಂತೆ ಹಲವು ಮಂದಿ ಹಿರಿಯರು, ಕುಟುಂಬ ಸದಸ್ಯರು ಹಾಗೂ ಕುಟುಂಬ ಸದಸ್ಯರ ಮನೆಯವರು ಉಪಸ್ಥಿತರಿದ್ದರು.
ಪ್ರಕೃತಿ ರಕ್ಷಣೆ ಹಾಗೂ ಸಮುದಾಯದ ಒಳಿತಿಗಾಗಿ ಪ್ರಾರ್ಥಿಸಿದ ಈ ವಿಶೇಷ ಆಚರಣೆಯು, ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಜೀವಂತಿಕೆಗೆ ಸಾಕ್ಷಿಯಾಯಿತು. ನಾಗದೇವರ ಕೃಪಾಶೀರ್ವಾದದೊಂದಿಗೆ ಈ ಬಾರಿಯ ನಾಗರ ಪಂಚಮಿ ಹಬ್ಬವು ಸಡಗರದಿಂದ ಸಮಾಪ್ತಿಗೊಂಡಿತು.



