ಮಂಗಳೂರು, ಜೂ. 9: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ 10ರಿಂದ ಮುಂಗಾರು ಮಳೆ ಮತ್ತಷ್ಟು ತೀವ್ರಗೊಳ್ಳಲಿದ್ದು, ಮುಂದಿನ ಕೆಲವು ದಿನಗಳ ಕಾಲ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸೋಮವಾರ ಬೆಳಿಗ್ಗೆಯಿಂದಲೇ ಮಂಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ಸಂಜೆಯ ವೇಳೆಗೆ ಬೆಳ್ತಂಗಡಿ, ಸುಳ್ಯ ಮತ್ತು ಪುತ್ತೂರಿನ ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದರೆ, ಮಂಗಳೂರು, ಉಳ್ಳಾಲ, ಬಂಟ್ವಾಳ ಮತ್ತು ಮೂಲ್ಕಿ ತಾಲೂಕುಗಳಲ್ಲಿ ಸಾಧಾರಣ ಮಳೆ ಸುರಿದಿದೆ.ಭಾನುವಾರ ಬೆಳಿಗ್ಗೆಯಿಂದ ಸೋಮವಾರ ಬೆಳಿಗ್ಗೆಯವರೆಗೆ ಜಿಲ್ಲೆಯಲ್ಲಿ ಸರಾಸರಿ 10.5 ಮಿ.ಮೀ. ಮಳೆಯಾಗಿದೆ. ಕಡಬದಲ್ಲಿ 27.3 ಮಿ.ಮೀ., ಪುತ್ತೂರಿನಲ್ಲಿ 11.3 ಮಿ.ಮೀ., ಉಳ್ಳಾಲದಲ್ಲಿ 10.4 ಮಿ.ಮೀ., ಬೆಳ್ತಂಗಡಿಯಲ್ಲಿ 9.4 ಮಿ.ಮೀ., ಬಂಟ್ವಾಳದಲ್ಲಿ 7.8 ಮಿ.ಮೀ., ಸುಳ್ಯದಲ್ಲಿ 5.3 ಮಿ.ಮೀ., ಮಂಗಳೂರಿನಲ್ಲಿ 4.3 ಮಿ.ಮೀ., ಮೂಲ್ಕಿಯಲ್ಲಿ 4.1 ಮಿ.ಮೀ. ಹಾಗೂ ಮೂಡುಬಿದಿರೆಯಲ್ಲಿ 2.3 ಮಿ.ಮೀ. ಮಳೆ ದಾಖಲಾಗಿದೆ.ಮುಂಗಾರು ಮಳೆ ಮತ್ತಷ್ಟು ಚುರುಕುಗೊಳ್ಳುತ್ತಿದ್ದು, ಜೂನ್ 12ರವರೆಗೆ ಈ ಭಾಗದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.





