ಮಂಗಳೂರು, ಜು. 29: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 16 ಠಾಣೆಗಳಲ್ಲಿ ಜಪ್ತಿ ಮಾಡಲಾಗಿದ್ದ ಸುಮಾರು ರೂ. 82 ಕೋಟಿ ಮೌಲ್ಯದ ಭಾರಿ ಪ್ರಮಾಣದ ಮಾದಕ ವಸ್ತುಗಳನ್ನು ಬುಧವಾರ ಮುಲ್ಕಿಯ ಕೊಲ್ನಾಡು ಇಂಡಸ್ಟ್ರಿಯಲ್ ಪ್ರದೇಶದಲ್ಲಿ ವೈಜ್ಞಾನಿಕ ಹಾಗೂ ಪರಿಸರ ಸ್ನೇಹಿ ವಿಧಾನದಲ್ಲಿ ಸುಟ್ಟು ನಾಶಪಡಿಸಲಾಯಿತು.

ನ್ಯಾಯಾಲಯದ ಅನುಮತಿಯೊಂದಿಗೆ 59 ಎನ್ಡಿಪಿಎಸ್ ಪ್ರಕರಣಗಳಿಗೆ ಸೇರಿದ 450 ಕೆಜಿ ಗಾಂಜಾ ಹಾಗೂ 75 ಕೋಟಿ ರೂ. ಮೌಲ್ಯದ 37 ಕೆಜಿ ಎಂಡಿಎಂಎ ಸೇರಿ ಒಟ್ಟು 43.26 ಕೆಜಿ ಎಂಡಿಎಂಎ ಮತ್ತಿತರ ಡ್ರಗ್ಸ್ ಅನ್ನು ‘ಡ್ರಗ್ ಡಿಸ್ಪೋಸಲ್ ಕಮಿಟಿ’ ಸಮ್ಮುಖದಲ್ಲಿ ವಿಲೇವಾರಿ ಮಾಡಲಾಗಿದೆ. 2026ರಲ್ಲಿ ಇದುವರೆಗೆ ನಗರದಲ್ಲಿ 87 ಪ್ರಕರಣಗಳಲ್ಲಿ 157 ಪೆಡ್ಲರ್ಗಳನ್ನು ಬಂಧಿಸಲಾಗಿದ್ದು, ಸಾರ್ವಜನಿಕರು ಡ್ರಗ್ಸ್ ಕುರಿತು ಮಾಹಿತಿ ನೀಡಲು 112 ಅಥವಾ ಕ್ಯೂಆರ್ ಕೋಡ್ ಬಳಸುವಂತೆ ಕಮಿಷನರ್ ಕೋರಿದ್ದಾರೆ. ಇನ್ನು 2026ನೇ ಸಾಲಿನಲ್ಲಿ ಇದುವರೆಗೆ 87 ಎನ್ಡಿಪಿಎಸ್ ಪ್ರಕರಣಗಳನ್ನು ದಾಖಲಿಸಿ 157 ಪೆಡ್ಲರ್ ಆರೋಪಿಗಳನ್ನು ಬಂಧಿಸಲಾಗಿದೆ.ಈ ಕಾರ್ಯಾಚರಣೆಗಳಲ್ಲಿ 8,18,30,130 ರೂ. ಮೌಲ್ಯದ 148 ಕೆ.ಜಿ. 615 ಗ್ರಾಂ ಗಾಂಜಾ, 7 ಕೆ.ಜಿ. 165 ಗ್ರಾಂ ಎಂಡಿಎಂಎ, 1 ಕೆ.ಜಿ. 705 ಗ್ರಾಂ ಹೈಡ್ರೋ ವೀಡ್ ಗಾಂಜಾ ಸೇರಿದಂತೆ ವಿವಿಧ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ಅವಧಿಯಲ್ಲಿ ಮಾದಕ ವಸ್ತು ಸೇವನೆಗೆ ಸಂಬಂಧಿಸಿದಂತೆ 463 ಮಂದಿಯ ವಿರುದ್ಧ 356 ಪ್ರಕರಣಗಳನ್ನು ದಾಖಲಿಸಲಾಗಿದೆ.
ನಾಶಪಡಿಸಲಾದ ಮಾದಕ ವಸ್ತುಗಳಲ್ಲಿ ಪ್ರಮುಖವಾಗಿ 2024ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಸುಮಾರು 75 ಕೋಟಿ ರೂ. ಮೌಲ್ಯದ 37 ಕೆ.ಜಿ. ಎಂಡಿಎಂಎ, 2025ರಲ್ಲಿ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಅಂದಾಜು 4.47 ಕೋಟಿ ರೂ. ಮೌಲ್ಯದ ಸುಮಾರು 4 ಕೆ.ಜಿ. ಎಂಡಿಎಂಎ, ಕೊಣಾಜೆ ಪೊಲೀಸ್ ಠಾಣೆಯ ಸುಮಾರು 20 ಲಕ್ಷ ರೂ. ಮೌಲ್ಯದ 106 ಕೆ.ಜಿ. ಗಾಂಜಾ ಹಾಗೂ ಮೂಡಬಿದ್ರೆ ಪೊಲೀಸ್ ಠಾಣೆಯ ಸುಮಾರು 36 ಲಕ್ಷ ರೂ ಮೌಲ್ಯದ 111 ಕೆ.ಜಿ. ಗಾಂಜಾ ಸೇರಿವೆ.
ಸಾರ್ವಜನಿಕರಿಗೆ ಮಾದಕ ವಸ್ತುಗಳಿಗೆ ಸಂಬಂಧಿಸಿದ ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣವೇ ಪೊಲೀಸ್ ಇಲಾಖೆಯಿಂದ ಸೃಜನೆ ಮಾಡಲಾಗಿರುವ ಕ್ಯೂಆರ್ ಕೋಡ್ ಮೂಲಕ ಅಥವಾ ಪೊಲೀಸ್ ಕಂಟ್ರೋಲ್ ರೂಮ್ 112 / 9480802321ಗೆ ಮಾಹಿತಿ ನೀಡುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.



