ಕರ್ನಾಟಕದ ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ವೈದ್ಯರು ನವೆಂಬರ್ 1ರಿಂದ ಪ್ರತಿದಿನ ರಾತ್ರಿ 9 ಗಂಟೆಗೆ ‘ಕರ್ತವ್ಯ’ ಆಪ್ ಮೂಲಕ ಹಾಜರಾತಿ ದಾಖಲಿಸುವುದು ಕಡ್ಡಾಯವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಲಭ್ಯತೆ ಖಚಿತಪಡಿಸಲು ಮತ್ತು ಹೊಣೆಗಾರಿಕೆ ಹೆಚ್ಚಿಸಲು ಆರೋಗ್ಯ ಇಲಾಖೆ ಈ ಮಹತ್ವದ ಆದೇಶ ಹೊರಡಿಸಿದೆ.


ರಾಜ್ಯದ ಗ್ರಾಮೀಣ ಹಾಗೂ ಅರೆ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಆರೋಗ್ಯ ಸೇವೆಯನ್ನು ಮತ್ತಷ್ಟು ಸುಧಾರಿಸುವ ಮತ್ತು ವೈದ್ಯರ ಹೊಣೆಗಾರಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯದ ತಾಲೂಕು ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ವೈದ್ಯರು ಇನ್ನು ಮುಂದೆ ಪ್ರತಿದಿನ ರಾತ್ರಿ 9 ಗಂಟೆಯ ಬಳಿಕ ‘ಕರ್ತವ್ಯ’ಆಪ್ ಮೂಲಕ ರಾತ್ರಿ ಹಾಜರಾತಿಯನ್ನು ದಾಖಲಿಸುವುದು ಕಡ್ಡಾಯಗೊಳಿಸಲಾಗಿದೆ. ಈ ಹೊಸ ನಿಯಮವು ನವೆಂಬರ್ 1ರಿಂದ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ.

ಜಿಯೋ-ಫೆನ್ಸಿಂಗ್ ವ್ಯವಸ್ಥೆಯ ಮೂಲಕ ಕಣ್ಗಾವಲು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅಕ್ಟೋಬರ್ 17ರಂದೇ ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ. ಇದರನ್ವಯ, ಕರ್ತವ್ಯ ಆಪ್ನಲ್ಲಿ ಪ್ರತ್ಯೇಕ ರಾತ್ರಿ ಹಾಜರಾತಿ ಮಾಡ್ಯೂಲ್ ಅನ್ನು ಸಿದ್ಧಪಡಿಸಲಾಗಿದ್ದು, ‘ಜಿಯೋ-ಫೆನ್ಸಿಂಗ್’ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದರ ಸಹಾಯದಿಂದ ವೈದ್ಯರು ತಾವು ಕರ್ತವ್ಯ ನಿರ್ವಹಿಸುವ ನಿಗದಿತ ಪ್ರದೇಶಗಳಿಂದಲೇ ಹಾಜರಾತಿ ಹಾಕುತ್ತಿದ್ದಾರೆ ಎಂಬುದನ್ನು ವ್ಯವಸ್ಥೆಯು ಖಚಿತಪಡಿಸಿಕೊಳ್ಳಲಿದೆ. ತಾಲೂಕು ಅಥವಾ ಗ್ರಾಮ ಮಟ್ಟದಲ್ಲಿ ನಿಯೋಜನೆಗೊಂಡಿರುವ ವೈದ್ಯರು ಪೂರ್ವಾನುಮತಿಯಿಲ್ಲದೆ ತಮ್ಮ ಕೇಂದ್ರಸ್ಥಾನದಿಂದ ಹೊರಹೋಗುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
