ಧರ್ಮಸ್ಥಳ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಧರ್ಮಸ್ಥಳ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ಇಂದಿನಿಂದ 5 ದಿನಗಳ ಕಾಲ ಲಕ್ಷದೀಪೋತ್ಸವ ನಡೆಯಲಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವವು ಇಂದಿನಿಂದ ನವೆಂಬರ್ 20ರವರೆಗೆ ನಡೆಯಲಿದ್ದು, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ದೇವಾಲಯವನ್ನು ಸಂಪೂರ್ಣವಾಗಿ ಅಲಂಕರಿಸಲಾಗಿದೆ. ಲಕ್ಷಾಂತರ ಭಕ್ತರನ್ನು ಆಕರ್ಷಿಸುವ ಈ ಪ್ರಸಿದ್ಧ ಉತ್ಸವದಲ್ಲಿ ಲಕ್ಷಾಂತರ ಜನರು ಪಾಲ್ಗೊಳ್ಳಲಿದ್ದಾರೆ.
ಇಂದು ಪಾದಾಯಾತ್ರೆಯಲ್ಲಿ ಸಾಗಿ ಬಂದ ಸಾವಿರಾರು ಭಕ್ತರು
ಚತುರ್ದಾನ ಪರಂಪರೆಯ ನಾಡಿನ ಪರಮಪಾವನ ಪುಣ್ಯಕ್ಷೇತ್ರ ಧರ್ಮಸ್ಥಳ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಪಾದಯಾತ್ರೆಯಲ್ಲಿ ಸಾಗಿ ಬಂದರು. ವಾಯ್ಲಿನ್ ಆದ್ಯ ಕೇರಳ, ಚೆಂಡೆ ಹಾಗೂ ವಿವಿಧ ವಿನೋದಾವಳಿಗಳು ಮೆರಗು ನೀಡಿತು.
ಪುಸ್ತಕ ಮಳಿಗೆಗಳು, ಆರೋಗ್ಯ, ಶಿಕ್ಷಣ, ಕೃಷಿ, ವಾಣಿಜ್ಯ, ಜೀವವಿಮೆ, ಸರ್ಕಾರದ ವಿವಿಧ ಇಲಾಖಾ ಮಳಿಗೆಗಳು, ಅಂಚೆ ಇಲಾಖೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಿರಿ ಗ್ರಾಮೋದ್ಯೋಗ ಸಂಸ್ಥೆ, ಗ್ರಾಮೀಣ ಕರಕುಶಲ ಕೈಗಾರಿಕೆಗಳು, ವಸ್ತç ಮಳಿಗೆಗಳು, ಆಯುರ್ವೇದ ಔಷಧಿ ಮಳಿಗೆಗಳು, ಪೂಜಾ ಸಾಮಾಗ್ರಿಗಳು, ಸಿರಿಧಾನ್ಯಗಳು, ಅಡಿಕೆ ಹಾಳೆತಟ್ಟೆ ತಯಾರಿ, ಸೇರಿದಂತೆ ೩೫೦ಕ್ಕೂ ಮಿಕ್ಕಿ ಮಳಿಗೆಗಳಿದ್ದು ಪ್ರೇಕ್ಷಕರ ಕಣ್ಮನ ಸೆಳೆಯುತ್ತವೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಎಲ್ಲಾ ಮಳಿಗೆಗಳಿಗೂ ಭೇಟಿ ನೀಡಿ ಶುಭ ಹಾರೈಸಿದರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ, ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ವಿಶ್ವನಾಥ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಸಿ.ಇ.ಒ. ಜನಾರ್ದನ ಕೆ.ಎನ್., ಎಸ್.ಡಿ.ಎಂ. ಕಾಲೇಜಿನ ಡಾ. ಶ್ರೀಧರ ಭಟ್, ಪಿ. ಜಿನರಾಜ ಆರಿಗ, ವಗ್ಗ ಮೊದಲಾದವರು ಉಪಸ್ಥಿತರಿದ್ದರು.
ನ. ೨೦ರ ವರೆಗೆ ಪ್ರತಿ ದಿನ ಬೆಳಿಗ್ಯೆ ಒಂಭತ್ತು ಗಂಟೆಯಿAದ ರಾತ್ರಿ ಹತ್ತು ಗಂಟೆ ವರೆಗೆ ವಸ್ತುಪ್ರದರ್ಶನಕ್ಕೆ ಉಚಿತ ಪ್ರವೇಶಾವಕಾಶವಿದೆ.
ವಸ್ತುಪ್ರದರ್ಶನ ವೇದಿಕೆಯಲ್ಲಿ ಪ್ರತಿದಿನ ಸಂಜೆ ಆರು ಗಂಟೆಯಿAದ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಇಂದು ಹೊಸಕಟ್ಟೆ ಉತ್ಸವ, ನವೆಂಬರ್ 16ರಂದು ಕೆರೆಕಟ್ಟೆ ಉತ್ಸವ, ನವೆಂಬರ್ 17ರಂದು ಲಲಿತೋದ್ಯಾನ ಉತ್ಸವ, ನವೆಂಬರ್ 18ರಂದು ಕಂಚಿಮಾರುಕಟ್ಟೆ ಉತ್ಸವ ಮತ್ತು ನವೆಂಬರ್ 19ರಂದು ಗೌರಿಮಾರುಕಟ್ಟೆ ಉತ್ಸವ ನಡೆಯಲಿದೆ. ನವೆಂಬರ್ 20ರಂದು ಬೆಳಿಗ್ಗೆ ಲಕ್ಷದೀಪೋತ್ಸವ ಮುಕ್ತಾಯಗೊಳ್ಳಲಿದ್ದು, ಸಂಜೆ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಲಿದೆ.
ನವೆಂಬರ್ 18 ಹಾಗೂ 19ರಂದು 93ನೇ ಸರ್ವಧರ್ಮ ಹಾಗೂ ಸಾಹಿತ್ಯ ಸಮ್ಮೇಳನ ನಡೆಯಲಿದೆ. ನವಂಬರ್ 19ರಂದು ಮಂಜುನಾಥ ಸ್ವಾಮಿಯ ಮಹಾ ರಥೋತ್ಸವ ನಡೆಯಲಿದೆ. ಲಕ್ಷದೀಪೋತ್ಸವದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸುಮಾರು 9 ದಶಕಗಳಿಂದ ನಡೆಯುತ್ತಿರುವ ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನವು ನವೆಂಬರ್ 18 ಮತ್ತು 19ರಂದು ಸಂಜೆ 5 ಗಂಟೆಗೆ ನಡೆಯಲಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಈ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರಿಹರಪುರದ ಸ್ವಯಂಪ್ರಕಾಶ್ ಸಚ್ಚಿದಾನಂದ ಸರಸ್ವತಿ ಸ್ವಾಮಿ ವಹಿಸಲಿದ್ದಾರೆ. ಪತ್ರಕರ್ತ ಎ. ಸೂರ್ಯಪ್ರಕಾಶ್ ಪಂಡಿತ್ ಮತ್ತು ಅಂಕಣಕಾರ ತನ್ವೀರ್ ಅಹ್ಮದುಲ್ಲಾ ಅವರಿಂದ ಭಾಷಣಗಳು ನಡೆಯಲಿವೆ. ರಾತ್ರಿ 8.30ಕ್ಕೆ ಚೆನ್ನೈನ ವಿದುಷಿ ಶೀಲಾ ಉನ್ನಿಕೃಷ್ಣನ್ ನಿರ್ದೇಶನದ ಭರತನಾಟ್ಯ ನೃತ್ಯ ಗಾಯನ ನಡೆಯಲಿದೆ.









