ಕರ್ನಾಟಕ ಸರ್ಕಾರ 2026-27ನೇ ಸಾಲಿನ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಟಿಸಿದ್ದು, ಮೇ 29ರಿಂದ ಶಾಲೆಗಳು ಪುನರಾರಂಭಗೊಳ್ಳಲಿವೆ. ವಿದ್ಯಾರ್ಥಿಗಳಿಗೆ ಈ ಬಾರಿ 18 ದಿನಗಳ ಸುದೀರ್ಘ ದಸರಾ ರಜೆ ಇರಲಿದೆ. ಮೊದಲ ಅವಧಿ ಅಕ್ಟೋಬರ್ 2ಕ್ಕೆ ಕೊನೆಗೊಂಡರೆ, ಎರಡನೇ ಅವಧಿ ಅಕ್ಟೋಬರ್ 22ಕ್ಕೆ ಆರಂಭವಾಗಲಿದೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಕರೆತರಲು ವಿಶೇಷ ಆಂದೋಲನಕ್ಕೂ ಶಿಕ್ಷಣ ಇಲಾಖೆ ಚಾಲನೆ ನೀಡಿದೆ.
ಪ್ರಸ್ತುತ ಬೇಸಿಗೆ ರಜೆಯ ಮಜಾದಲ್ಲಿರುವ ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಕರ್ನಾಟಕ ಸರ್ಕಾರವು ಅತ್ಯಂತ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಮುಂಬರುವ 2026-27ನೇ ಶೈಕ್ಷಣಿಕ ಸಾಲಿನ ಅಧಿಕೃತ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಸರ್ಕಾರ ಪ್ರಕಟಿಸಿದ್ದು, ಮೇ 29 ರಿಂದಲೇ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ (Aided) ಮತ್ತು ಅನುದಾನರಹಿತ ಶಾಲೆಗಳು ಪುನರಾರಂಭಗೊಳ್ಳಲಿವೆ ಎಂದು ಸ್ಪಷ್ಟಪಡಿಸಿದೆ. ಈ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
ವಿದ್ಯಾರ್ಥಿಗಳಿಗೆ 18 ದಿನಗಳ ದಸರಾ ರಜೆ!:
ಈ ಬಾರಿಯ ಶೈಕ್ಷಣಿಕ ಕ್ಯಾಲೆಂಡರ್ನಲ್ಲಿ ವಿದ್ಯಾರ್ಥಿಗಳಿಗೆ ಹಬ್ಬದ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಈ ವರ್ಷದ ದಸರಾ ಹಬ್ಬಕ್ಕೆ ಸತತ 18 ದಿನಗಳ ಸುದೀರ್ಘ ರಜೆಯನ್ನು ಘೋಷಿಸಲಾಗಿದೆ. ಶೈಕ್ಷಣಿಕ ಸಾಲಿನ ಮೊದಲ ಅವಧಿಯು (First Term) ಮೇ 29 ರಿಂದ ಅಕ್ಟೋಬರ್ 2 ರವರೆಗೆ ನಡೆಯಲಿದ್ದು, ಅಕ್ಟೋಬರ್ 3 ರಿಂದಲೇ ದಸರಾ ರಜೆಗಳು ಆರಂಭವಾಗಲಿವೆ.
ಅಕ್ಟೋಬರ್ 22 ರಿಂದ ಎರಡನೇ ಅವಧಿ ಆರಂಭ:
ದಸರಾ ರಜೆಯ ಮುಕ್ತಾಯದ ನಂತರ, ಎರಡನೇ ಶೈಕ್ಷಣಿಕ ಅವಧಿಯು ಅಕ್ಟೋಬರ್ 22 ರಿಂದ ಪ್ರಾರಂಭವಾಗಿ ಏಪ್ರಿಲ್ 2027 ರವರೆಗೆ ಮುಂದುವರಿಯಲಿದೆ. ಏಪ್ರಿಲ್ ಕೊನೆಯಲ್ಲಿ ವಾರ್ಷಿಕ ಪರೀಕ್ಷೆಗಳೊಂದಿಗೆ ಈ ಸಾಲಿ ಶೈಕ್ಷಣಿಕ ಅವಧಿ ಮುಕ್ತಾಯಗೊಳ್ಳಲಿದೆ. ಸರ್ಕಾರದ ಮಾಹಿತಿ ಪ್ರಕಾರ, ವರ್ಷದ 365 ದಿನಗಳ ಪೈಕಿ ಒಟ್ಟು 245 ದಿನಗಳು ಕೆಲಸದ ದಿನಗಳಾಗಿರುತ್ತವೆ . ಇದರಲ್ಲಿ 181 ದಿನಗಳನ್ನು ಸಂಪೂರ್ಣವಾಗಿ ಬೋಧನೆಗಾಗಿ (Teaching) ಮೀಸಲಿಡಲಾಗಿದ್ದು, ಉಳಿದ ದಿನಗಳನ್ನು ಪಠ್ಯೇತರ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಬಳಸಲಾಗುತ್ತದೆ. ಇದರೊಂದಿಗೆ ಜೂನ್ 30 ರ ಒಳಗಾಗಿ ಶಾಲೆಗಳು ತಮ್ಮ ಎಲ್ಲಾ ಪ್ರವೇಶ ಪ್ರಕ್ರಿಯೆಗಳನ್ನು (Admission Process) ಪೂರ್ಣಗೊಳಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.
ಶಾಲೆಯಿಂದ ಹೊರಗುಳಿದ ಮಕ್ಕಳಿಗಾಗಿ ವಿಶೇಷ ಆಂದೋಲನ:
ಇದೇ ವೇಳೆ ಶಿಕ್ಷಣ ಇಲಾಖೆಯು ಮತ್ತೊಂದು ಶ್ಲಾಘನೀಯ ನಿರ್ಧಾರ ಕೈಗೊಂಡಿದ್ದು, ಶಾಲೆಯಿಂದ ಹೊರಗುಳಿದ (Dropouts) ಮಕ್ಕಳನ್ನು ಮರಳಿ ಶಿಕ್ಷಣದ ಮುಖ್ಯವಾಹಿನಿಗೆ ತರಲು ವಿಶೇಷ ಅಭಿಯಾನವನ್ನು ಘೋಷಿಸಿದೆ. 6 ರಿಂದ 18 ವರ್ಷದೊಳಗಿನ ಮಕ್ಕಳನ್ನು ಗುರಿಯಾಗಿಸಿಕೊಂಡು ಜಿಲ್ಲಾ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಈ ಆಂದೋಲನ ಜಾರಿಗೆ ಬರಲಿದೆ. ಅರ್ಧಕ್ಕೆ ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಮರು ದಾಖಲಾತಿ ಮಾಡಿಸುವ ಮೂಲಕ ಅವರಿಗೆ ಉತ್ತಮ ಭವಿಷ್ಯವನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.





