ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ರಾಜ್ಯ ಸರ್ಕಾರದಿಂದ ಪರಿಹಾರದ ನಿರೀಕ್ಷೆ ಮೂಡಿದೆ. ಪ್ರತಿ ಎಕರೆಗೆ ₹2,500 ತಾತ್ಕಾಲಿಕ ಬರ ಪರಿಹಾರ ಘೋಷಿಸಲಾಗಿದ್ದು, ಈ ಹಣ ಇನ್ನೆರಡು ದಿನಗಳಲ್ಲಿ ರೈತರ ಖಾತೆಗೆ ಜಮೆಯಾಗಲಿದೆ ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ. ಕೇಂದ್ರದಿಂದ ಹೆಚ್ಚಿನ ಪರಿಹಾರ ನಿರೀಕ್ಷೆಯಲ್ಲಿದ್ದು, ಕೇಂದ್ರ ಅಧ್ಯಯನ ತಂಡವೂ ರಾಜ್ಯದಲ್ಲಿ ಬರ ಪರಿಸ್ಥಿತಿಯ ಪರಿಶೀಲನೆ ನಡೆಸುತ್ತಿದೆ.


ಮಂಡ್ಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ರೈತ ಮುಖಂಡರ ಸಭೆಯಲ್ಲಿ ರೈತರ ಕುಂದುಕೊರತೆ, ಬರ ಪರಿಸ್ಥಿತಿ, ಕುಡಿಯುವ ನೀರು, ಕಾವೇರಿ ನೀರು ಹಾಗೂ ಜಿಲ್ಲೆಯ ವಿವಿಧ ಅಭಿವೃದ್ಧಿ ವಿಚಾರಗಳ ಕುರಿತು ಮಾತನಾಡಿ, ರೈತರಿಗೆ ನೋವಾಗುವ ಯಾವುದೇ ತೀರ್ಮಾನವನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ. ರೈತರ ಸಹಕಾರ ಹಾಗೂ ಮಾರ್ಗದರ್ಶನವಿದ್ದರೆ ಅವರ ಅಗತ್ಯಗಳಿಗೆ ಸ್ಪಂದಿಸಲು ತಾನು ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು.
ಹಾಲಿನ ದರ ಏರಿಕೆ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದ್ದು, ಅನುಮತಿ ದೊರೆತರೆ ತಕ್ಷಣವೇ ದರ ಹೆಚ್ಚಿಸಲಾಗುವುದು. ಇಲ್ಲವಾದರೆ ಚುನಾವಣೆ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.


