ಬೆಂಗಳೂರು: ಹಿಂದೂ ಧರ್ಮವು ನೋಂದಣಿ ಆಗಿಲ್ಲ ಎಂದಿರುವ ಮುಖ್ಯಸ್ಥ ಮೋಹನ್ ಭಾಗವತ್ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ವನ್ನು ಹಿಂದೂ ಧರ್ಮಕ್ಕೆ ಹೋಲಿಕೆ ಮಾಡಿರುವುದು ಅತ್ಯಂತ ಖಂಡನೀಯ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಹರಿಪ್ರಸಾದ್, ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ, ತತ್ವಶಾಸ್ತ್ರ ಮತ್ತು ವೈವಿಧ್ಯತೆಯನ್ನು ಹೊಂದಿರುವ ಹಿಂದೂ ಧರ್ಮವನ್ನು ಒಂದು ನಿರ್ದಿಷ್ಟ ಸಂಘಟನೆಯ ಮಟ್ಟಕ್ಕೆ ಇಳಿಸಿ ನೋಡುವುದು ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಅವಮಾನ ಎಂದಿದ್ದಾರೆ.
ಹಿಂದೂ ಧರ್ಮವು ಯಾವುದೇ ಒಂದು ಸಂಘಟನೆಯ ಸ್ವತ್ತಲ್ಲ. ಅದು ಆರ್ಎಸ್ಎಸ್ಗಿಂತಲೂ ದೊಡ್ಡದು, ವಿಶಾಲವಾದುದು ಮತ್ತು ಎಲ್ಲರನ್ನು ಒಳಗೊಳ್ಳುವ ನಾಗರಿಕತಾ ಪರಂಪರೆ. ವಿವಾದಾತ್ಮಕ ಹಿನ್ನೆಲೆ ಹೊಂದಿರುವ ಒಂದು ಸಂಘಟನೆಯನ್ನು ಸಂಪೂರ್ಣ ಹಿಂದೂ ಸಮಾಜದ ಪ್ರತಿನಿಧಿಯಂತೆ ಬಿಂಬಿಸುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
ಹಿಂದೂತ್ವದ ಬಗ್ಗೆ ದಿನವೂ ದೊಡ್ಡ ದೊಡ್ಡ ಭಾಷಣ ಮಾಡುವ ಬಿಜೆಪಿಯ ನಾಯಕರು ಮತ್ತು ಸ್ವಯಂ ಘೋಷಿತ ‘ಹಿಂದೂ ರಕ್ಷಕರು’ ಈಗ ಏನು ಹೇಳುತ್ತಾರೆ? ಹಿಂದೂ ಧರ್ಮ ಮತ್ತು ಆರ್ಎಸ್ಎಸ್ ಒಂದೇ ಎಂದು ಹೇಳುವುದನ್ನು ಅವರು ಒಪ್ಪುತ್ತಾರೆಯೇ? ಎಂದು ತಿರುಗೇಟು ನೀಡಿದ್ದಾರೆ.



