ರೇವಾ, ನ.2: ಮಧ್ಯಪ್ರದೇಶದ ರೇವಾ ಕ್ಷೇತ್ರದ ಬಿಜೆಪಿ ಸಂಸದ ಜನಾರ್ದನ ಮಿಶ್ರಾ ಅವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದೆ. ಈ ಬಾರಿ ಅವರು ರಾಜಕೀಯ ವಿಚಾರವಾಗಿ ಸುದ್ದಿಯಾಗಿಲ್ಲ. ಬದಲಾಗಿ, ತಮ್ಮ ಕೈಯಿಂದಲೇ ಶೌಚಾಲಯದ ಸೀಟ್ ಸ್ವಚ್ಛಗೊಳಿಸುತ್ತಿರುವ ವಿಡಿಯೋ ಚರ್ಚೆಗೆ ಗ್ರಾಸವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಜನಾರ್ದನ ಮಿಶ್ರಾ ಅವರು ಯಾವುದೇ ಸ್ವಚ್ಛತಾ ಕಾರ್ಮಿಕರ ಸಹಾಯ ಪಡೆಯದೆ, ಬರಿಗೈಯಲ್ಲೇ ಶೌಚಾಲಯದ ಸೀಟ್ ಸ್ವಚ್ಛಗೊಳಿಸುತ್ತಿರುವುದು ಕಂಡುಬಂದಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹಲವರ ಗಮನ ಸೆಳೆದಿದೆ.


ರೀಲ್ಗಾಗಿ ಸ್ವಚ್ಛತಾ ಕಾರ್ಯ?
ಸಂಸದರು ಈ ಕೆಲಸವನ್ನು ಸಾಮಾಜಿಕ ಮಾಧ್ಯಮದಲ್ಲಿ ರೀಲ್ ಮಾಡುವ ಉದ್ದೇಶದಿಂದ ಮಾಡಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಆದರೆ, ವಿಡಿಯೋ ಯಾವ ಸಂದರ್ಭದಲ್ಲಿ ಚಿತ್ರೀಕರಿಸಲಾಗಿದೆ ಮತ್ತು ಅದರ ಹಿಂದಿನ ನಿಖರ ಉದ್ದೇಶವೇನು ಎಂಬುದು ಇನ್ನೂ ಸ್ವತಂತ್ರವಾಗಿ ದೃಢಪಟ್ಟಿಲ್ಲ. ಹೀಗಾಗಿ, ರೀಲ್ಗಾಗಿ ಈ ಕೆಲಸ ಮಾಡಿದ್ದಾರೆ ಎಂಬುದನ್ನು ಖಚಿತ ಮಾಹಿತಿ ಎಂದು ಪರಿಗಣಿಸಲು ಸಾಧ್ಯವಿಲ್ಲ.

