ಬೆಂಗಳೂರು, ಜು.16: ಭಾರತ ಮತ್ತು ಬ್ರಿಟನ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದ (CETA) ಜುಲೈ 15ರಿಂದ ಜಾರಿಗೆ ಬಂದಿದ್ದು, ಇದರ ಪರಿಣಾಮವಾಗಿ ಕರ್ನಾಟಕದಲ್ಲಿ ಪ್ರೀಮಿಯಂ ಆಮದು ಮದ್ಯದ ದರ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ಅಬಕಾರಿ ತೆರಿಗೆ ನೀತಿಯಿಂದ ಪ್ರೀಮಿಯಂ ಮದ್ಯದ ಬೆಲೆ ಇಳಿಕೆಯಾಗಿದ್ದು, ಇದೀಗ ಭಾರತ-ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದದಿಂದ ಗ್ರಾಹಕರಿಗೆ ಮತ್ತಷ್ಟು ಬೆಲೆ ರಿಯಾಯಿತಿ ದೊರೆಯುವ ನಿರೀಕ್ಷೆ ಮೂಡಿದೆ.

ಕರ್ನಾಟಕ ಸರ್ಕಾರ ಮೇ 11ರಿಂದ ‘ಆಲ್ಕೋಹಾಲ್ ಇನ್ ಬೇವರೇಜ್ (Alcohol in Beverage – AIB)’ ಆಲ್ಕೋಹಾಲ್ ಪ್ರಮಾಣವನ್ನು ಆಧರಿಸಿದ ಹೊಸ ಅಬಕಾರಿ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ನೀತಿಯ ಪರಿಣಾಮವಾಗಿ ಕಡಿಮೆ ಆಲ್ಕೋಹಾಲ್ ಅಂಶ ಹೊಂದಿರುವ ದುಬಾರಿ, ಪ್ರೀಮಿಯಂ ಆಮದು ಮದ್ಯಗಳ ಬೆಲೆ ಈಗಾಗಲೇ ಶೇ 15ರಿಂದ 23ರಷ್ಟು ಇಳಿಕೆಯಾಗಿದೆ. ಇದಕ್ಕೆ ವಿರುದ್ಧವಾಗಿ, ಹೆಚ್ಚು ಆಲ್ಕೋಹಾಲ್ ಅಂಶ ಹೊಂದಿರುವ ಕೆಲವು ಕಡಿಮೆ ಬೆಲೆಯ ಬ್ರಾಂಡ್ಗಳ ದರ ಏರಿಕೆಯಾಗಿದೆ.
ಬ್ರಿಟನ್ನಿಂದ ಆಮದಾಗುವ ಸ್ಕಾಚ್ ವಿಸ್ಕಿ ದರ ಇಳಿಕೆ
ಈ ಬೆಳವಣಿಗೆಯ ಬೆನ್ನಲ್ಲೇ ಭಾರತ-ಬ್ರಿಟನ್ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ (CETA) ಜುಲೈ 15ರಿಂದ ಅಧಿಕೃತವಾಗಿ ಜಾರಿಗೆ ಬಂದಿದೆ. ಇದರಡಿ ಬ್ರಿಟನ್ನಿಂದ ಆಮದು ಮಾಡಿಕೊಳ್ಳುವ ಸ್ಕಾಚ್ ವಿಸ್ಕಿಯ ಮೇಲಿನ ಕಸ್ಟಮ್ಸ್ ಸುಂಕವನ್ನು ತಕ್ಷಣದಿಂದಲೇ ಶೇ 150 ರಿಂದ ಶೇ 75ಕ್ಕೆ ಇಳಿಸಲಾಗಿದೆ. ಮುಂದಿನ 10 ವರ್ಷಗಳಲ್ಲಿ ಇದನ್ನು ಹಂತ ಹಂತವಾಗಿ ಶೇ 40ಕ್ಕೆ ಇಳಿಸುವ ಯೋಜನೆ ಇದೆ.
ತಕ್ಷಣವೇ ಪ್ರೀಮಿಯಂ ಮದ್ಯದ ಬೆಲೆ ಇಳಿಕೆಯಾಗುತ್ತಾ?
ಆದರೆ ಈ ಬೆಲೆ ಇಳಿಕೆ ತಕ್ಷಣವೇ ಜಾರಿಗೆ ಬರುವುದಿಲ್ಲ. ಹೊಸ ಸುಂಕ ವ್ಯವಸ್ಥೆ ಜಾರಿ, ಅಗತ್ಯ ದಾಖಲೆ ಪ್ರಕ್ರಿಯೆ ಹಾಗೂ ವಿತರಣಾ ವ್ಯವಸ್ಥೆಯ ಬದಲಾವಣೆ ಪೂರ್ಣಗೊಂಡ ನಂತರವೇ ಗ್ರಾಹಕರಿಗೆ ಇದರ ಸಂಪೂರ್ಣ ಲಾಭ ಸಿಗಲಿದೆ ಎಂದು ಉದ್ಯಮ ವಲಯ ಹೇಳಿದೆ.



