ಬೆಂಗಳೂರು, ಜು. 1: ಅಮೇರಿಕಾ ಮತ್ತು ಇರಾನ್ ನಡುವಿನ ಯುದ್ಧದ ಬಳಿಕ ಪೆಟ್ರೋಲ್, ಡೀಸೆಲ್ ಸೇರಿದಂತೆ ವಾಣಿಜ್ಯ ಮತ್ತು ಗೃಹಬಳಕೆ ಸಿಲಿಂಡರ್ ಬೆಲೆಗಳಲ್ಲಿ ಸತತವಾಗಿ ಏರಿಕೆ ಕಂಡುಬಂದಿತ್ತು. ಆದರೆ ಇಂದಿನಿಂದ (ಜು.01) ವಾಣಿಜ್ಯ ಬಳಕೆಯ (19 ಕೆಜಿ) ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ 183.50 ರೂಪಾಯಿಗಳಷ್ಟು ಕಡಿತಗೊಳಿಸಲಾಗಿದ್ದು, ವ್ಯಾಪಾರಿಗಳು ಮತ್ತು ಹೋಟೆಲ್ ಮಾಲೀಕರಿಗೆ ಗುಡ್ ನ್ಯೂಸ್ ಸಿಕ್ಕಿದೆ.
ಹೋಟೆಲ್ ಅಸೋಸಿಯೇಷನ್ ಮಾಹಿತಿ
ಈ ವರ್ಷದ ಫೆಬ್ರವರಿ 28 ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯು ಜಾಗತಿಕವಾಗಿ ತೀವ್ರ ಇಂಧನ ಬಿಕ್ಕಟ್ಟನ್ನು ಸೃಷ್ಟಿಸಿತ್ತು. ಈ ದಾಳಿಯ ನಂತರ, ಇರಾನ್ ತನ್ನ ನಿಯಂತ್ರಣದಲ್ಲಿರುವ ‘ಸ್ಟ್ರೈಟ್ ಆಫ್ ಹಾರ್ಮುಜ್’ (Strait of Hormuz) ಜಲಸಂಧಿಯ ಮೂಲಕ ಕಚ್ಚಾ ತೈಲ ಮತ್ತು ಅನಿಲವನ್ನು ಸಾಗಿಸುವ ಹಡಗುಗಳ ಸಂಚಾರವನ್ನು ನಿರ್ಬಂಧಿಸಿತ್ತು. ಈ ಪೂರೈಕೆ ವ್ಯತ್ಯಯದಿಂದಾಗಿ ವಿಶ್ವಾದ್ಯಂತ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆಗಳು ಗಗನಕ್ಕೇರಿದ್ದವು. ಇದೀಗ ಹೋಟೆಲ್ ಅಸೋಸಿಯೇಷನ್ ನೀಡಿರುವ ಮಾಹಿತಿಯ ಪ್ರಕಾರ, ಕಳೆದ ಜೂನ್ ತಿಂಗಳಲ್ಲಿ 3,198 ರೂಪಾಯಿ ತಲುಪಿದ್ದ 19 ಕೆಜಿಯ ಕಮರ್ಷಿಯಲ್ ಸಿಲಿಂಡರ್ ದರವು, ಸದ್ಯ 3,021 ರೂಪಾಯಿಗೆ ಇಳಿಕೆಯಾಗಿದೆ.
ಇತ್ತೀಚೆಗೆ ನಾಲ್ಕು ಬಾರಿ ಹೆಚ್ಚಾಗಿದ್ದ ವಾಣಿಜ್ಯ ಸಿಲಿಂಡರ್ ಬೆಲೆ
ಹಾರ್ಮುಜ್ ಜಲಸಂಧಿಯ ಇಂಧನ ಪೂರೈಕೆ ಅಡಚಣೆಯ ನಂತರ ಭಾರತದಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಒಟ್ಟು ನಾಲ್ಕು ಬಾರಿ ಹೆಚ್ಚಿಸಲಾಗಿತ್ತು. ಭಾರಿ ನಷ್ಟದ ಹಿನ್ನೆಲೆಯನ್ನು ಉಲ್ಲೇಖಿಸಿ ತೈಲ ಕಂಪನಿಗಳು ಮಾರ್ಚ್ನಲ್ಲಿ 144 ರೂ., ಏಪ್ರಿಲ್ನಲ್ಲಿ 195.50 ರೂ. ಮತ್ತು ಮೇ ತಿಂಗಳಲ್ಲಿ ಬರೋಬ್ಬರಿ 993 ರೂ.ನಷ್ಟು ಬೆಲೆ ಏರಿಕೆ ಮಾಡಿದ್ದವು. ತದನಂತರ, ಜೂನ್ನಲ್ಲಿ ಮತ್ತೊಮ್ಮೆ 42 ರೂ. ಹೆಚ್ಚಿಸಲಾಗಿತ್ತು. ಹೀಗೆ ಒಟ್ಟು ನಾಲ್ಕು ಕಂತುಗಳಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 1,374.50 ರೂ.ನಷ್ಟು ಹೆಚ್ಚಿಸಲಾಗಿತ್ತು.



