ಛತ್ತೀಸ್ಗಢ ಹೈಕೋರ್ಟ್ ಶಾಲೆಗಳಲ್ಲಿ ಗಾಯತ್ರಿ ಮಂತ್ರ, ಸರಸ್ವತಿ ವಂದನೆ ನಿಷೇಧಿಸುವ ಅರ್ಜಿಯನ್ನು ವಜಾಗೊಳಿಸಿದೆ. ಯಾವುದೇ ನಿರ್ದಿಷ್ಟ ಧರ್ಮವನ್ನು ಹೇರದ ಹೊರತು, ಭಾರತೀಯ ಸಂಸ್ಕೃತಿ ಹಾಗೂ ನೈತಿಕ ಮೌಲ್ಯಗಳ ಬೋಧನೆ ಸಂವಿಧಾನ ವಿರೋಧಿಯಲ್ಲ. ಎನ್ಇಪಿ 2020 ರ ಭಾಗವಾಗಿ, ಜ್ಞಾನ ಮತ್ತು ಏಕಾಗ್ರತೆ ಹೆಚ್ಚಿಸುವ ಈ ಆಚರಣೆಗಳು ಕಡ್ಡಾಯವಲ್ಲ, ವೈಯಕ್ತಿಕ ನಂಬಿಕೆಗೆ ಧಕ್ಕೆ ಇಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಬಿಲಾಸ್ಪುರ, ಜು. 9: ಸರ್ಕಾರಿ ಶಾಲೆಗಳ ಬೆಳಗಿನ ಪ್ರಾರ್ಥನೆಯಲ್ಲಿ ಗಾಯತ್ರಿ ಮಂತ್ರ, ಸರಸ್ವತಿ ವಂದನೆ ಮತ್ತು ಶಾಂತಿ ಮಂತ್ರಗಳನ್ನು ಪಠಿಸುವುದನ್ನು ತಡೆಯಬೇಕು ಮತ್ತು ಸರ್ಕಾರದ ಆದೇಶವನ್ನು ರದ್ದುಗೊಳಿಸಬೇಕು ಎಂದು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅಜರ್ಜಯನ್ನು ಛತ್ತೀಸ್ಗಢ ಹೈಕೋರ್ಟ್ ವಜಾಗೊಳಿಸಿದೆ. ಯಾವುದೇ ನಿರ್ದಿಷ್ಟ ಧಾರ್ಮಿಕ ಸಿದ್ಧಾಂತವನ್ನು ಬಲವಂತವಾಗಿ ಹೇರದ ಹೊರತು, ಶಾಲೆಗಳಲ್ಲಿ ಭಾರತೀಯ ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳನ್ನು ಕಲಿಸುವುದನ್ನು ಸಂವಿಧಾನವು ನಿಷೇಧಿಸುವುದಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ವಿವಾದವೇನು, ಆದೇಶದಲ್ಲಿ ಏನಿದೆ?
ಛತ್ತೀಸ್ಗಢ ಶಾಲಾ ಶಿಕ್ಷಣ ಇಲಾಖೆಯು ಜೂನ್ 12 ರಂದು ಸುತ್ತೋಲೆಯೊಂದನ್ನು ಹೊರಡಿಸಿತ್ತು. ಅದರ ಪ್ರಕಾರ, 2026-27ನೇ ಸಾಲಿನಿಂದ ಎಲ್ಲಾ ಸರ್ಕಾರಿ ಶಾಲೆಗಳ ಬೆಳಗಿನ ಪ್ರಾರ್ಥನೆ ವೇಳೆ ರಾಷ್ಟ್ರಗೀತೆ, ರಾಷ್ಟ್ರಗೀತೆ, ಸರಸ್ವತಿ ವಂದನೆ, ಗುರು ಮಂತ್ರ ಹಾಗೂ ದಿನದ ಕೊನೆಯಲ್ಲಿ ಗಾಯತ್ರಿ ಮಂತ್ರ ಮತ್ತು ಶಾಂತಿ ಮಂತ್ರಗಳನ್ನು ಪಠಿಸಬೇಕು ಎಂದು ಸೂಚಿಸಲಾಗಿತ್ತು.
ಇದನ್ನು ವಿರೋಧಿಸಿ ಕೆಲವು ವ್ಯಕ್ತಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ‘‘ಇದು ಶಿಕ್ಷಣದ ಕೇಸರಿಕರಣ ಮತ್ತು ಸಂವಿಧಾನದ ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿದೆ. ಸರ್ಕಾರಿ ಅನುದಾನ ಪಡೆಯುವ ಶಾಲೆಗಳಲ್ಲಿ ಇಂತಹ ಧಾರ್ಮಿಕ ಮಂತ್ರಗಳನ್ನು ಕಡ್ಡಾಯಗೊಳಿಸುವುದರಿಂದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ’’ ಎಂದು ಅರ್ಜಿದಾರರ ಪರ ವಕೀಲ ಆಮಿರ್ ಖಾನ್ ವಾದಿಸಿದ್ದರು.
ಅಕಾಲಿಕ ಅರ್ಜಿ: ಅರ್ಜಿದಾರರು ಕೇವಲ ಊಹಾಪೋಹಗಳ ಆಧಾರದ ಮೇಲೆ, ರಾಜಕೀಯ ಪ್ರೇರಿತವಾಗಿ ಈ ಅರ್ಜಿ ಸಲ್ಲಿಸಿದ್ದಾರೆ. ಇದರಿಂದ ಯಾರಿಗೂ ನೇರ ಹಾನಿಯಾಗಿಲ್ಲ ಎಂದು ಹೇಳಿದ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿದೆ.
ಈ ಹಿಂದೆಯೂ ಮಧ್ಯಪ್ರದೇಶ ಮತ್ತು ಹರಿಯಾಣದ ಶಾಲೆಗಳಲ್ಲಿ ಗೀತಾ ಪಠಣ ಹಾಗೂ ಯೋಗವನ್ನು ಕಡ್ಡಾಯಗೊಳಿಸಿದಾಗ ಸುಪ್ರೀಂ ಕೋರ್ಟ್ ಮತ್ತು ವಿವಿಧ ಹೈಕೋರ್ಟ್ಗಳು ಅವುಗಳನ್ನು ಧಾರ್ಮಿಕ ಆಚರಣೆಗಿಂತ ಹೆಚ್ಚಾಗಿ ನೈತಿಕ ಮತ್ತು ದೈಹಿಕ ಶಿಕ್ಷಣ ಎಂದು ಪರಿಗಣಿಸಿ ಮಾನ್ಯ ಮಾಡಿದ್ದವು. ಈಗ ಛತ್ತೀಸ್ಗಢ ಹೈಕೋರ್ಟ್ ಕೂಡ ಅದೇ ಮಾದರಿಯ ತೀರ್ಪು ನೀಡಿದೆ.



