ಬೇಸಿಗೆಯ ಬಿಸಿಲು ಆರಂಭವಾಗುತ್ತಿದ್ದಂತೆ ತಣ್ಣೀರಿನ ಬೇಡಿಕೆ ಹೆಚ್ಚಾಗುತ್ತದೆ. ಸುಡುವ ಬಿಸಿಲಿನಲ್ಲಿ ಹೊರಗೆ ಹೋಗಿ ಬಂದವರು ಫ್ರಿಡ್ಜ್ನ ತಣ್ಣೀರು ಕುಡಿಯಲು ಇಷ್ಟಪಡುತ್ತಾರೆ. ಇನ್ನೂ ಕೆಲವರು ಮಣ್ಣಿನ ಪಾತ್ರೆಯ ನೀರನ್ನು ಆಯ್ಕೆ ಮಾಡುತ್ತಾರೆ. ಆದರೆ ಈ ಎರಡರಲ್ಲಿ ಯಾವುದು ಆರೋಗ್ಯಕ್ಕೆ ಯಾವುದು ಹಿತ ಎಂಬುದರ ಬಗ್ಗೆ ಹಲವರಲ್ಲಿ ಸಂಶಯ ಇದೆ. ತಜ್ಞರು ಏನು ಹೇಳುತ್ತಾರೆ? ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ನೈಸರ್ಗಿಕ ಎಸಿ ಮಣ್ಣಿನ ಮಡಕೆ
ವಾಸ್ತವವಾಗಿ, ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿದ ನೀರು ನೈಸರ್ಗಿಕವಾಗಿ ತಂಪಾಗಿರುತ್ತದೆ. ಇದು ಕೇವಲ ಸಂಪ್ರದಾಯವಲ್ಲ ಅದರ ಹಿಂದೆ ದೊಡ್ಡ ವಿಜ್ಞಾನವೇ ಅಡಗಿದೆ. ಇದು ದೇಹದ ತಾಪಮಾನವನ್ನು ಸಮತೋಲನಗೊಳಿಸುವುದಲ್ಲದೆ, ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹ ಸಹಾಯ ಮಾಡುತ್ತದೆ. ಜೊತೆಗೆ, ದೇಹದಲ್ಲಿನ ನೀರಿನ ಮಟ್ಟವನ್ನು ಸಮತೋಲನದಲ್ಲಿಡುತ್ತದೆ ಮತ್ತು ದೇಹವು ಆಹಾರ ಹಾಗೂ ಪಾನೀಯಗಳನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಕ್ರಿಯೆಯನ್ನು ಹೆಚ್ಚಿಸುತ್ತದೆ. ಬಿಸಿಲಿನ ಬೇಗೆಯಿಂದ ರಕ್ಷಿಸುವುದಲ್ಲದೆ, ಗಂಟಲಿನ ಉರಿಯನ್ನು ಕಡಿಮೆ ಮಾಡುವ ಗುಣವೂ ಇದಕ್ಕೆ ಇದೆ.
ನಾವು ಸೇವಿಸುವ ಆಹಾರಗಳು ದೇಹದಲ್ಲಿ ಆಮ್ಲೀಯತೆಯನ್ನು ಹೆಚ್ಚಿಸುತ್ತವೆ. ಮಣ್ಣು ನೈಸರ್ಗಿಕವಾಗಿ ಕ್ಷಾರೀಯ ಗುಣವನ್ನು ಹೊಂದಿರುವುದರಿಂದ, ಇದು ದೇಹದ ಆಮ್ಲೀಯತೆ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆಗೆ ಅನುಕೂಲಕರ
ಮಡಕೆ ನೀರು ಕುಡಿಯುವುದರಿಂದ ಚಯಾಪಚಯ ಕ್ರಿಯೆ ಉತ್ತಮಗೊಂಡು ಜೀರ್ಣಕ್ರಿಯೆ ಸುಧಾರಿಸುತ್ತದೆ. ನಿರ್ಜಲೀಕರಣಕ್ಕೆ ಬ್ರೇಕ್: ಮಣ್ಣಿನಲ್ಲಿರುವ ಖನಿಜಾಂಶಗಳು ದೇಹವನ್ನು ಬೇಗನೆ ಪುನರ್ಜಲೀಕರಣಗೊಳಿಸುತ್ತವೆ, ಇದರಿಂದ ಸುಸ್ತು ಕಡಿಮೆಯಾಗುತ್ತದೆ. ಗಂಟಲಿಗೆ ಹಿತ: ಶೀತ ಅಥವಾ ಉಸಿರಾಟದ ಸಮಸ್ಯೆ ಇರುವವರಿಗೂ ಮಡಕೆ ನೀರು ಅತ್ಯಂತ ಸುರಕ್ಷಿತ.
ಫ್ರಿಡ್ಜ್ ನೀರು
ಎಚ್ಚರಿಕೆ ಅಗತ್ಯ ಇದಕ್ಕೆ ವಿರುದ್ಧವಾಗಿ, ಫ್ರಿಡ್ಜ್ನ ನೀರು ತುಂಬಾ ತಣ್ಣಗಿರುತ್ತದೆ. ಅತಿಯಾದ ತಣ್ಣೀರು ಹೆಚ್ಚು ಪ್ರಮಾಣದಲ್ಲಿ ಕುಡಿಯುವುದರಿಂದ ಜೀರ್ಣಕ್ರಿಯೆಗೆ ತೊಂದರೆ ಆಗಬಹುದು. ಜೊತೆಗೆ ಗಂಟಲು ಸಮಸ್ಯೆ, ಶೀತ ಹಾಗೂ ದೇಹದ ಉಷ್ಣತೆಯಲ್ಲಿ ಹಠಾತ್ ಬದಲಾವಣೆ ಉಂಟಾಗುವ ಸಾಧ್ಯತೆಯಿದೆ. ವಿಶೇಷವಾಗಿ ಬಿಸಿಲಿನಲ್ಲಿ ಹೊರಗಿನಿಂದ ಬಂದ ತಕ್ಷಣ ತಣ್ಣೀರು ಕುಡಿಯಬಾರದು ಎಂದು ತಜ್ಞರು ಎಚ್ಚರಿಸುತ್ತಾರೆ.
ಜೀರ್ಣಾಂಗಕ್ಕೆ ತೊಂದರೆ
ಅತಿಯಾದ ತಣ್ಣನೆಯ ನೀರು ಸೇವಿಸಿದಾಗ ಜೀರ್ಣಕ್ರಿಯೆಯ ವೇಗ ಕಡಿಮೆಯಾಗುತ್ತದೆ. ಇದು ಹೊಟ್ಟೆಯ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು. ತಾಪಮಾನ ಬದಲಾವಣೆ: ಬಿಸಿಲಿನಿಂದ ಬಂದ ತಕ್ಷಣ ಫ್ರಿಡ್ಜ್ ನೀರು ಕುಡಿಯುವುದರಿಂದ ದೇಹದ ಉಷ್ಣತೆಯಲ್ಲಿ ದಿಢೀರ್ ಬದಲಾವಣೆಯಾಗಿ ಶೀತ, ಕೆಮ್ಮು ಅಥವಾ ಗಂಟಲು ನೋವು ಕಾಣಿಸಿಕೊಳ್ಳಬಹುದು.
ರಾಸಾಯನಿಕಗಳ ಭಯ: ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರನ್ನು ದೀರ್ಘಕಾಲ ಸಂಗ್ರಹಿಸಿಡುವುದರಿಂದ ಅದರಲ್ಲಿರುವ ರಾಸಾಯನಿಕಗಳು ನೀರಿನಲ್ಲಿ ಬೆರೆಯುವ ಸಾಧ್ಯತೆ ಇರುತ್ತದೆ. ತಜ್ಞರ ಪ್ರಕಾರ ಹೇಳುವ ಪ್ರಕಾರ ಕೃತಕವಾಗಿ ತಣ್ಣಗಾಗಿಸಿದ ಫ್ರಿಡ್ಜ್ ನೀರಿಗಿಂತ ಪ್ರಕೃತಿಯ ಮಣ್ಣಿನ ಮಡಕೆಯ ನೀರೇ ಶ್ರೇಷ್ಠ. ಮಡಕೆಯಲ್ಲಿ ಯಾವುದೇ ರಾಸಾಯನಿಕಗಳಿರುವುದಿಲ್ಲ ಮತ್ತು ಅದು ನೀರನ್ನು ಶುದ್ಧೀಕರಿಸುವ ಗುಣವನ್ನೂ ಹೊಂದಿದೆ.





