ಕೈಕಂಬ: ಮುತ್ತೂರು ಬೆಜ್ಜೆ ಬಂಜನ್ ಕುಟುಂಬ ಮನೆಯಲ್ಲಿ ಫೆ. 7 ರಿಂದ 9ರವರೆಗೆ ದೈವಗಳ ಪುನರ್ ಪ್ರತಿಷ್ಠೆ, ನೇಮೋತ್ಸವ, ಕೋಲೋತ್ಸವ ಹಾಗೂ ಸರ್ವಸೇವೆಯು ಮೂರು ದಿನಗಳ ಪರ್ಯಾಂತ ವಿವಿಧ ವೈಧಿಕ ವಿಧಾನಗಳೊಂದಿಗೆ ಜರಗಲಿದೆ.
ಫೆ. 7ರಂದು ಬೆಳಿಗ್ಗೆ 8-00 ಗಂಟೆಯಿಂದ ಶ್ರೀ ನಾಗ ಮತ್ತು ಶ್ರೀ ನಾಗಬ್ರಹ್ಮ ದೇವರಿಗೆ ತಂಬಿಲ ಸೇವೆ, ಗಣಪತಿ ಹೋಮ, ನವಕ ಕಲಶ, ಪುನರ್ ಪ್ರತಿಷ್ಠೆ, ಮುಡಿಪು ಶುದ್ದ ಹಾಗೂ ಕುಪ್ಪೆಟ್ಟು ಪಂಜುರ್ಲಿ ದೈವದ ದರ್ಶನ ಸೇವೆ ನಡೆಯಲಿದೆ. ಈ ಸಂದರ್ಭದಲ್ಲಿ ಮೊಗ ಸಮರ್ಪಣೆ ನಡೆಯಲಿದ್ದು, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ. ಅಂದು ಸಂಜೆ 7-00 ಗಂಟೆಯಿಂದ ಮಹಿಷಂದಾಯ, ಜುಮಾದಿ ಅನ್ನಪ್ಪ ಪಂಜುರ್ಲಿ ದೈವಗಳಿಗೆ ನೇಮೋತ್ಸವ ಜರಗಲಿದೆ. ರಾತ್ರಿ ಅನ್ನ ಸಂತರ್ಪಣೆ ನಡೆಯಲಿದೆ.
ಫೆ. 8ರಂದು ಸಂಜೆ 4-00 ಗಂಟೆಯಿಂದ ಶ್ರೀ ಸತ್ಯದೇವತೆ (ಪೊಸಪ್ಪೆ), ಹಿರಿಯಜ್ಜ, ಕುಪ್ಪೆಟ್ಟು ಮಂತ್ರದೇವತೆ, ಕಲ್ಲುರ್ಟಿ, ಕುಪ್ಪೆಟ್ಟು ಪಂಜುರ್ಲಿ, ಸ್ಥಳದ ಕಲ್ಲುರ್ಟಿ ಪಂಜುರ್ಲಿ, ಕುಟುಂಬದ ಕಲ್ಲುರ್ಟಿ ಪಂಜುರ್ಲಿ, ಕೊರತಿ, ಗುಳಿಗ ಮತ್ತು ಒಂಟಿ ಗುಳಿಗ ದೈವಗಳಿಗೆ ಕೋಲೋತ್ಸವ ಜರಗಲಿದೆ. ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.
ಫೆ. 9ರಂದು ಸಂಜೆಯಿಂದ ದೈವಗಳಿಗೆ ಪರ್ವ ಸೇವೆ ನಡೆಯಲಿದ್ದು, ಕುಟುಂಬಿಕರು ಎಲ್ಲಾ ಕಾರ್ಯಕ್ರಮಗಳಲ್ಲಿ ಉಪಸ್ಥಿತರಿದ್ದು, ತನು-ಮನ-ಧನಗಳಿಂದ ಸಹಕರಿಸಿ ಶ್ರೀ ದೈವಗಳ ಗಂಧಪ್ರಸಾದ ಸ್ವೀಕರಿಸುವಂತೆ ಕಾರ್ಯಕಾರಿ ಸಮಿತಿ ವಿನಂತಿಸಿಕೊಂಡಿದೆ.





