ನವದೆಹಲಿ, ಅ.2: ದುಬೈನಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಸಹ-ಪೈಲಟ್ ನಡೆಸಿದ ದಾಳಿಯ ಪ್ರಯತ್ನವನ್ನು ವಿಫಲಗೊಳಿಸುವ ಮೂಲಕ 180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮಾತುಕತೆ ನಡೆಸಿದ್ದಾರೆ.


ಭಾರತೀಯ ಪೈಲಟ್ ಕ್ಯಾಪ್ಟನ್ ಮಚ್ಚಾರ್ ಅವರೊಂದಿಗೆ ಪ್ರಧಾನಿ ಮೋದಿ ಅವರು ವಿಡಿಯೋ ಕರೆ ಮಾಡಿ ಮಾತನಾಡಿಸಿದರು. ಈ ಸಂದರ್ಭ ಘಟನೆ ವೇಳೆಯ ತಮ್ಮ ಅನುಭವವನ್ನು ಹಂಚಿಕೊಂಡ ಕ್ಯಾಪ್ಟನ್ ಮಚ್ಚಾರ್ ಅವರು, “ನಿಮ್ಮ ಜೊತೆ ಮಾತನಾಡಲು ಅವಕಾಶ ಸಿಗುತ್ತದೆ ಅಂದ್ಕೊಂಡಿರಲಿಲ್ಲ. ನನಗೆ ಅತ್ಯುತ್ತಮ ಚಿಕಿತ್ಸೆ ಲಭಿಸಿದೆ. ಸಂಕಷ್ಟದ ಕಾಲದಲ್ಲಿ ನಾನು ಹನುಮಾನ್ ಚಾಲೀಸಾ ಪಠಿಸಿದೆ. ಭಗವಾನ್ ಹನುಮಂತ ನನಗೆ ಧೈರ್ಯ ನೀಡಿದನು. ಇಂಥ ಕಠಿಣ ಪರಿಸ್ಥಿತಿಯಲ್ಲಿ ನಾನು ಧೈರ್ಯ ಪ್ರದರ್ಶಿಸದಿದ್ದರೆ 180 ಪ್ರಯಾಣಿಕರು ಪ್ರಾಣ ಕಳೆದುಕೊಳ್ಳುತ್ತಿದ್ದರು. ಹೀಗಾಗಿ, ನಾನು ಗಂಭೀರವಾಗಿ ಗಾಯಗೊಂಡರೂ, ಪ್ರಯಾಣಿಕರ ಜೀವಕ್ಕೆ ಆಪತ್ತು ಎದುರಾಗಬಾರದು ಅಂತ ಧೈರ್ಯದಿಂದ ಹೋರಾಡಿದೆ” ಎಂದು ತಿಳಿಸಿದರು.ಪ್ರಧಾನಿ ಪೈಲಟ್ ತೋರಿದ ಧೈರ್ಯವನ್ನು ಶ್ಲಾಘಿಸಿದರು. “ನಿಮ್ಮ ದೇಹದಲ್ಲಿ ಗಂಭೀರ ಗಾಯವಾಗಿತ್ತು. ನೀವು ಸ್ವತಃ ಜೀವನ್ಮರಣದ ಹೋರಾಟದಲ್ಲಿದ್ದಿರಿ. ಆ ಸಮಯದಲ್ಲಿ ನೀವು ನಿಮ್ಮ ಪ್ರಾಣದ ಬಗ್ಗೆ ಚಿಂತಿಸದೆ, ಎಲ್ಲಾ ಪ್ರಯಾಣಿಕರ ಜೀವಗಳ ಬಗ್ಗೆ ಕಾಳಜಿ ವಹಿಸಿದಿರಿ. ಶೀಘ್ರವೇ ಗುಣಮುಖರಾಗಿರಿ” ಎಂದು ಹಾರೈಸಿದರು.”ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರು ಯುಎಇಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಸ್ಮಿತ್ ಮಚ್ಚಾರ್ ಅವರ ಮನೋಬಲವು ಉತ್ತಮವಾಗಿದೆ. ಅವರು ಹರ್ಷಚಿತ್ತದಿಂದ ಇದ್ದಾರೆ. ಭಾರತೀಯ ರಾಯಭಾರ ಕಚೇರಿಯು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ” ಎಂದು ಯುಎಇಯಲ್ಲಿರುವ ಭಾರತದ ರಾಯಭಾರಿ ದೀಪಕ್ ಮಿತ್ತಲ್ ಮಾಹಿತಿ ನೀಡಿದ್ದಾರೆ.



