ಇತ್ತೀಚಿನ ದಿನಗಳಲ್ಲಿ, ಹೆಣ್ಣುಮಕ್ಕಳು ಸಣ್ಣ ಮಯಸ್ಸಿನಲ್ಲಿಯೇ ಋತುಮತಿಯಾಗುವ ಸಮಸ್ಯೆ ಸಾಮಾನ್ಯವಾಗಿ ಬಿಟ್ಟಿದೆ. ಸಾಮಾನ್ಯವಾಗಿ 12 ರಿಂದ 15 ವರ್ಷದೊಳಗೆ ಮುಟ್ಟಾಗಬೇಕಾಗಿರುವ ಮಕ್ಕಳು 8ರ ಆಸುಪಾಸಿನಲ್ಲಿಯೇ ಪ್ರೌಢಾವಸ್ಥೆಗೆ ಬರುತ್ತಿದ್ದಾರೆ. ಆರರಿಂದ ಒಂಭತ್ತು ವರ್ಷದೊಳಗಿನ ಹುಡುಗಿಯರು ಅಕಾಲಿಕ ಮುಟ್ಟನ್ನು ಅನುಭವಿಸುತ್ತಿರುವ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಇದು ಸಾಮಾನ್ಯವೂ ಅಲ್ಲ, ಆರೋಗ್ಯಕರವೂ ಅಲ್ಲ. ಇನ್ನು ಸಣ್ಣ ವಯಸ್ಸಿನಲ್ಲಿಯೇ ಮುಟ್ಟು ಪ್ರಾರಂಭವಾದಾಗ ಆ ಹುಡುಗಿಯರೆಲ್ಲರೂ ಅಂಡೋತ್ಪತ್ತಿ ಮಾಡುತ್ತಾರೆ ಎಂದಲ್ಲ. ಕೆಲವೊಮ್ಮೆ, ಚಿಕ್ಕ ವಯಸ್ಸಿನಲ್ಲಿ ಮುಟ್ಟು ಪ್ರಾರಂಭವಾದಾಗ , ಅಂಡೋತ್ಪತ್ತಿಯಾಗದೆಯೇ ಇರಬಹುದು. ಇದು ಕೆಲವು ವರ್ಷಗಳವರೆಗೆ ಮುಟ್ಟನ್ನು ಹೆಚ್ಚು ಅನಿಯಮಿತ ಮಾಡಿಬಿಡುತ್ತದೆ.
ಹೆಣ್ಣುಮಕ್ಕಳ ಪೋಷಕರು ತಿಳಿದುಕೊಳ್ಳಲೇ ಬೇಕಾದ ವಿಷಯ:
ನೀವು ಕೂಡಾ ಹೆಣ್ಣುಮಗುವಿನ ಪೋಷಕರಾಗಿದ್ದರೆ, ಅರ್ಲಿ ಪೀರಿಯಡ್ಸ್ ಬಗ್ಗೆ ನಿಮಗೆ ಮಾಹಿತಿ ತಿಳಿದಿರಲೇಬೇಕು. ನಿಮ್ಮ ಮಗಳ ಆರೋಗ್ಯಕರ ಪ್ರೌಢಾವಸ್ಥೆಗೆ ಇದು ನಿರ್ಣಾಯಕವಾಗಿದೆ.
ಕೆಲವೊಮ್ಮೆ ಆರಂಭಿಕ ಮುಟ್ಟು ಆನುವಂಶಿಕ ಅಂಶಗಳಿಂದ ಉಂಟಾಗಬಹುದು. ಉದಾಹರಣೆಗೆ, ಹುಡುಗಿಯ ತಾಯಿ, ಅಜ್ಜಿ, ಮುತ್ತಜ್ಜಿಗೆ ಬೇಗನೆ ಮುಟ್ಟಾಗಿದ್ದರೆ ಅದು ನಂತರದ ಪೀಳಿಗೆಯ ಮೇಲೂ ಪರಿಣಾಮ ಬೀರಬಹುದು. ಜೊತೆಗೆ ಪರಿಸರ ಅಂಶಗಳು ಸಹ ಇಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ನಿರೀಕ್ಷಿತ ಅವಧಿಗೆ ಮುನ್ನವೇ ಋತುಚಕ್ರ ಆರಂಭವಾಗುವುದಕ್ಕೆ ಹಲವು ಕಾರಣಗಳಿವೆ. ಅವುಗಳೆಂದರೆ:
1. ದೇಹದಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಾಗುವುದು: ಇತ್ತೀಚಿನ ದಿನಗಳಲ್ಲಿ ಜೀವನಶೈಲಿ ಸಂಪೂರ್ಣವಾಗಿ ಬದಲಾಗಿದೆ. ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಸಂಸ್ಕರಿಸಿದ ಮತ್ತು ಪ್ಯಾಕ್ ಮಾಡಿದ ಆಹಾರವನ್ನು ನೀಡಲಾಗುತ್ತದೆ. ಇದರಿಂದ ದೇಹದಲ್ಲಿ ಕೊಬ್ಬಿನ ಶೇಖರಣೆ ಹೆಚ್ಚಾಗುತ್ತದೆ. ಇದು ದೇಹದಲ್ಲಿ ಈಸ್ಟ್ರೊಜೆನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಪರಿಣಾಮವಾಗಿ, ಮಕ್ಕಳು 12 ವರ್ಷಕ್ಕಿಂತ ಮೊದಲೇ ಋತುಚಕ್ರವನ್ನು ಅನುಭವಿಸಲು ಪ್ರಾರಂಭಿಸುತ್ತಾರೆ.
2. ರಾಸಾಯನಿಕಯುಕ್ತ ಉತ್ಪನ್ನಗಳು: “ಇಂದಿನ ಮಕ್ಕಳು ಆರಂಭದಿಂದಲೂ ವಿವಿಧ ರಾಸಾಯನಿಕಗಳಿಗೆ ಒಡ್ಡಿಕೊಳ್ಳುತ್ತಾರೆ. ಅದು ಆಹಾರ ಉತ್ಪನ್ನಗಳಾಗಿರಲಿ, ಔಷಧಿಗಳಾಗಿರಲಿ ಅಥವಾ ದೇಹದ ಆರೈಕೆ ಉತ್ಪನ್ನಗಳಾಗಿರಲಿ, ಈ ರಾಸಾಯನಿಕಗಳು ದೇಹದಲ್ಲಿ ಕ್ಸೆನೋಈಸ್ಟ್ರೋಜೆನ್ಗಳನ್ನು ಹೆಚ್ಚಿಸುತ್ತವೆ. ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಮುಟ್ಟಾಗುವುದಕ್ಕೆ ಇದು ಮುಖ್ಯ ಕಾರಣ.
3. ಒತ್ತಡದ ವಾತಾವರಣ: ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಟಿಸಿದ ಅಧ್ಯಯದ ಪ್ರಕಾರ, ಒತ್ತಡದ ಜೀವನಶೈಲಿಯೂ ಅರ್ಲಿ ಪಿರೀಯೆಡ್ಸ್ಗೆ ಕಾರಣ ಎಂದು ಹೇಳಿದೆ. ಮನೆಯ ವಾತಾವರಣ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಇದು ಅವರ ಮಾನಸಿಕ ಆರೋಗ್ಯದ ಮೇಲೆ ಮಾತ್ರವಲ್ಲದೆ ಅವರ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಋತುಚಕ್ರ ಆರಂಭವಾಗುತ್ತದೆ.
ಆಹಾರ ಪದ್ಧತಿ: ಮೇಲಿನ ಅಧ್ಯಯನದ ಪ್ರಕಾರ, 3 ರಿಂದ 5 ವರ್ಷದೊಳಗಿನ ಮಕ್ಕಳು ಸಸ್ಯ ಪ್ರೋಟೀನ್ಗಿಂತ ಹೆಚ್ಚು ಪ್ರಾಣಿ ಪ್ರೋಟೀನ್ ಸೇವಿಸುತ್ತಾರೆ. ಇದರಿಂದ ಅವರಿಗೆ ಬಾಲ್ಯಾವಸ್ಥೆಯಲ್ಲಿ ಋತುಚಕ್ರವಾಗುತ್ತದೆ. ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿ ಋತುಚಕ್ರವಾದಾಗ ಎದುರಾಗುವ ಸಮಸ್ಯೆಗಳು: ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಋತುಚಕ್ರವಾಗುವುದರಿಂದ ಕೆಲವು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಉಂಟಾಗಬಹುದು. ಆ ಸಮಸ್ಯೆಗಳು ಯಾವುವೆಂದರೆ:
1.ಬೊಜ್ಜು.
2.ಮಧುಮೇಹದ ಅಪಾಯ.
3.ಹೃದ್ರೋಗದ ಅಪಾಯ.
4.ಕೆಲವು ರೀತಿಯ ಕ್ಯಾನ್ಸರ್ ಅಪಾಯ. 5. ಆತಂಕ ಮತ್ತು ಖಿನ್ನತೆ
6.ಮಾನಸಿಕ ಆರೋಗ್ಯದ ಮೇಲೆ ಪರಿಣಾಮ .
ಈ ವಿಷಯಗಳನ್ನು ನೆನಪಿನಲ್ಲಿಡಿ:
1. ಮಕ್ಕಳ ಆರೈಕೆ ಉತ್ಪನ್ನಗಳ ಬಗ್ಗೆ ಕಾಳಜಿ ವಹಿಸಿ: ತಜ್ಞರ ಪ್ರಕಾರ, ನಾವು ಮಕ್ಕಳ ಆರೈಕೆಗಾಗಿ ಬಾಡಿ ವಾಶ್, ಶಾಂಪೂ, ಹೇರ್ ಆಯಿಲ್ ಮುಂತಾದ ವಿವಿಧ ಉತ್ಪನ್ನಗಳನ್ನು ಬಳಸುತ್ತೇವೆ. ಈ ಸಮಯದಲ್ಲಿ ಬಳಸುವ ಉತ್ಪನ್ನಗಳ ಬಗ್ಗೆ ಜಾಗರೂಕರಾಗಿರುವುದು ಬಹಳ ಮುಖ್ಯ. ಯಾವಾಗಲೂ ರಾಸಾಯನಿಕ ಮುಕ್ತ, ನೈಸರ್ಗಿಕ ಉತ್ಪನ್ನಗಳನ್ನು ಬಳಸಲು ಪ್ರಯತ್ನಿಸಿ.
2. ಮಕ್ಕಳನ್ನು ದೈಹಿಕವಾಗಿ ಸಕ್ರಿಯವಾಗಿಡಲು ಪ್ರಯತ್ನಿಸಿ: ಹುಡುಗಿಯರು ಬಾಲ್ಯದಿಂದಲೇ ದೈಹಿಕವಾಗಿ ಸಕ್ರಿಯರಾಗಿರುವಂತೆ ನೋಡಿಕೊಳ್ಳಬೇಕು. ಅವರನ್ನು ಹೊರಾಂಗಣ ಚಟುವಟಿಕೆಗಳು ಮತ್ತು ಆಟಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು.ಇದು ಅವರ ದೇಹವನ್ನು ಸಕ್ರಿಯವಾಗಿರಿಸುವುದರ ಜೊತೆಗೆ ದೇಹದಲ್ಲಿ ಹೆಚ್ಚುವರಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತದೆ.
3. ಸಂಸ್ಕರಿಸಿದ ಮತ್ತು ಪ್ಯಾಕ್ ಮಾಡಿದ ಆಹಾರಗಳಿಂದ ದೂರವಿರಿ: ಮಗುವಿಗೆ ಬಾಲ್ಯದಿಂದಲೇ ಆರೋಗ್ಯಕರ ಆಹಾರವನ್ನು ಮಾತ್ರ ನೀಡಿ. ಜಂಕ್ ಫುಡ್, ಸಂಸ್ಕರಿಸಿದ ಆಹಾರಗಳು ಮತ್ತು ಹುರಿದ ಆಹಾರಗಳಿಂದ ಎಷ್ಟು ಸಾಧ್ಯವೋ ಅಷ್ಟು ದೂರವಿಡಿ. ಇಲ್ಲವಾದಲ್ಲಿ ಈ ಆಹಾರಗಳು ಅವರ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇದು ಆರಂಭಿಕ ಪ್ರೌಢಾವಸ್ಥೆಗೆ ಕಾರಣವಾಗಬಹುದು.
4. ಒತ್ತಡ ನಿರ್ವಹಣೆ ಕೂಡ ಮುಖ್ಯ: ನಿಮ್ಮ ಮಕ್ಕಳಿಗೆ ಆರೋಗ್ಯಕರ ಮತ್ತು ಸಂತೋಷದ ವಾತಾವರಣವನ್ನು ಒದಗಿಸಲು ಪ್ರಯತ್ನಿಸಿ. ವಿಶೇಷವಾಗಿ ಮನೆಯಲ್ಲಿ ಸಕಾರಾತ್ಮಕ ಕೌಟುಂಬಿಕ ವಾತಾವರಣವನ್ನು ಕಾಪಾಡಿಕೊಳ್ಳಿ. ಕಳಪೆ ವಾತಾವರಣವು ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅಕಾಲಿಕ ಪ್ರೌಢಾವಸ್ಥೆಗೆ ಕಾರಣವಾಗಬಹುದು.
5. ಮಕ್ಕಳ ಬೆಳವಣಿಗೆಯ ಮೇಲೆ ಪರಿಣಾಮ: ಹಣ್ಣುಗಳು, ಹಾಲು, ಮೊಸರು ಮತ್ತು ಚೀಸ್ನಂತಹ ಡೈರಿ ಉತ್ಪನ್ನಗಳು ಸಮೃದ್ಧವಾಗಿರುವ ಆಹಾರವನ್ನು ನೀಡಬೇಕು. ಹೊರಗಿನ ಆಹಾರಕ್ಕಿಂತ ಮನೆಯಲ್ಲಿ ತಯಾರಿಸಿದ ಊಟದ ಮೇಲೆ ಗಮನಹರಿಸುವುದು ಬಹಳ ಮುಖ್ಯ. ಮುಟ್ಟು ಬೇಗನೆ ಆರಂಭವಾದರೆ ಅದು ಮಕ್ಕಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಆರೋಗ್ಯಕರ ದೈಹಿಕ ಬೆಳವಣಿಗೆಯನ್ನು ಉತ್ತೇಜಿಸಲು ಓಟ ಮತ್ತು ಸೈಕ್ಲಿಂಗ್ನಂತಹ ಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕು.
(ಬರಹ: ರಂಜಿತಾ ಆರ್.ಕೆ.)





