ವೇಣೂರು: ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ ಎಂಬ ಕಾರಣಕ್ಕೆ ಪಕ್ಷಕ್ಕೆ ರಾಜೀನಾಮೆ ನೀಡಿರುವ ಶೇಖರ ಕುಕ್ಕೇಡಿಯವರ ಮನವೊಲಿಕೆ ಮಾಡಲು ನಾಯಕರು ಮುಂದಾಗಬೇಕು ಮತ್ತು ಅವರ ಸಮುದಾಯದ ಬೇಡಿಕೆಗೆ ಜಿಲ್ಲಾ ಕಾಂಗ್ರೆಸ್ ನಾಯಕರು ತಕ್ಷಣ ಸ್ಪಂದಿಸಬೇಕು ಎಂದು ಗುಂಡೂರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿರುವ ಪಿ. ರಮೇಶ್ ಪೂಜಾರಿ ಪಡ್ಡಾಯಿಮಜಲು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಓರ್ವ ನಿಷ್ಠಾವಂತ ನಾಯಕರಾಗಿರುವ ಶೇಖರ ಕುಕ್ಕೇಡಿಯವರು ಪಕ್ಷದ ಏಳಿಕೆಗೆ ತೆರೆಮರೆಯ ಕಾಯಿಯಂತೆ ಶ್ರಮಿಸಿದವರು. ತಳ ಸಮುದಾಯದ ಏಳಿಕೆಗೆ ನಿರಂತರ ಶ್ರಮಿಸುತ್ತಿರುವ ಶೇಖರ ಕುಕ್ಕೇಡಿಯವರು ಅಜಾತಶತ್ರು ಆಗಿದ್ದಾರೆ. ಎಲ್ಲರೊಂದಿಗೂ ಉತ್ತಮ ಒಡನಾಟ ಹೊಂದಿರುವ ನಾಯಕನ ಬೇಡಿಕೆಯನ್ನು ಈಡೇರಿಸುವುದು ಪಕ್ಷದ ಜವಾಬ್ದಾರಿ ಎಂದು ರಮೇಶ್ ಪಡ್ಡಾಯಿಮಜಲು ಹೇಳಿಕೆ ನೀಡಿದ್ದಾರೆ.





