ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ, ಪಟ್ಲ ಸತೀಶ್ ಶೆಟ್ಟಿ ಸೇರಿದಂತೆ ಹಲವು ಗಣ್ಯರ ಸಂತಾಪ
ಬೆಳ್ಮಣ್: ತುಳುನಾಡಿನ ಅತ್ಯಂತ ಕಾರಣಿಕ ಕ್ಷೇತ್ರಗಳಲ್ಲಿ ಒಂದಾದ ಮುಂಡ್ಕೂರು ಜಾರಿಗೆಕಟ್ಟೆ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ದಿವಾಕರ ಪೂಜಾರಿ (60) ಫೆಬ್ರವರಿ 15 ರಂದು ತೀವ್ರ ಹೃದಯಾಘಾತಕ್ಕೆ ಒಳಗಾಗಿ ನಿಧನ ಹೊಂದಿದ್ದಾರೆ.
ಕಾಸರಗೋಡಿನಲ್ಲಿ ದೈವ ದರ್ಶನಕ್ಕೆಂದು ತೆರಳಿದ್ದ ಸಂದರ್ಭ ಹೃದಯಾಘಾತಕ್ಕೊಳಗಾದ ದಿವಾಕರ ಪೂಜಾರಿಯವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಮುಂಡ್ಕೂರಿನ ಜಾರಿಗೆಕಟ್ಟೆಯ ಕೊರಗಜ್ಜ-ಕೊರಗರ ಪಂಜುರ್ಲಿ ಕ್ಷೇತ್ರದ ಧರ್ಮದರ್ಶಿಯಾಗಿ ಸತ್ಕರ್ಯಗಳನ್ನು ಮಾಡಿಕೊಂಡು ಬಂದಿದ್ದರು.
ಕಲೆ ಕಾರಣಿಕದ ಈ ಕ್ಷೇತ್ರಕ್ಕೆ ಧಾರ್ಮಿಕ ಮುಖಂಡರು, ರಾಜಕೀಯ ದುರೀಣರು, ಕಲಾ ಕ್ಷೇತ್ರದ ನಟ-ನಟಿಯರು ಆಗಮಿಸುತ್ತಿರುವ ಅತ್ಯಂತ ಪ್ರಸಿದ್ದ ಕ್ಷೇತ್ರವಾಗಿದೆ. ಸಹಸ್ರಾರು ಭಕ್ತಾದಿಗಳು ಆಗಮಿಸುವ ಕ್ಷೇತ್ರದಲ್ಲಿ ನಿರಂತರ ಕೋಲ, ಅಗೇಲು ಸೇವೆಗಳು ನಡೆಯುತ್ತಿದ್ದವು. ಕ್ಷೇತ್ರದಲ್ಲಿ ಕ್ರೈಸ್ತ, ಮುಸ್ಲಿಂ ಸಮಾಜದ ಬಂಧುಗಳೂ ಹರಕೆಯ ಕೋಲ ಹಾಗೂ ಅಗೇಲು ಸೇವೆ ನೀಡುತ್ತಿದ್ದುದು ಇಲ್ಲಿಯ ವಿಶೇಷವಾಗಿತ್ತು.
ದಿವಾಕರ ಪೂಜಾರಿಯವರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮುಂಡ್ಕೂರು ಪೊಸ್ರಾಲು ಬ್ರಹ್ಮಶ್ರೀ ನಾರಾಯಣ ಗುರು ಸಂಘದ ಅಧ್ಯಕ್ಷರಾಗಿದ್ದು, ಇತ್ತೀಚೆಗೆ ಸಂಘದ ನೂತನ ಕಟ್ಟಡ ನಿರ್ಮಾಣದಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.
ಗಣ್ಯರಿಂದ ಸಂತಾಪ
ಮೃತರ ನಿಧನಕ್ಕೆ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ, ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.





