ಏಡ್ಸ್ ಎಂಬುದು ಹೆಚ್ಐವಿ ಎಂಬ ವೈರಸ್ನಿಂದ ಬರುವ ಸೋಂಕಾಗಿದ್ದು, ಆರಂಭಿಕ ಹಂತದಲ್ಲಿ ಇದಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಈ ರೋಗ ಗಂಭೀರವಾಗಿ ಪರಿಣಮಿಸಬಹುದು. ಹಾಗಾಗಿ ಈ ರೋಗದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ಧೇಶದಿಂದ ಪ್ರತಿವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತದೆ.
ಹ್ಯೂಮನ್ ಇಮ್ಯೂನೊ ಡಿಫಿಷಿಯೆನ್ಸಿ ವೈರಸ್ HIV ನಿಂದ ಬರುವ ಏಡ್ಸ್ ಮಾರಣಾಂತಿಕ ಕಾಯಿಲೆಯಾಗಿದೆ. ಆರಂಭಿಕ ಹಂತದಲ್ಲಿ ಸರಿಯಾದ ಚಿಕಿತ್ಸೆ ನೀಡದಿದ್ದರೆ, ಈ ಕಾಯಿಲೆ ಮಾರಣಾಂತಿಕವಾಗಿ ಪರಿಣಮಿಸುತ್ತದೆ. ಇಂದಿಗೂ ಈ ರೋಗದ ಬಗ್ಗೆ ಹಲವು ತಪ್ಪು ಕಲ್ಪನೆಗಳಿವೆ ಮತ್ತು ಈ ಕಾಯಿಲೆಯಿಂದ ಬಳಲುತ್ತಿರುವವರನ್ನು ಸಮಾಜದಲ್ಲಿ ಬಹಳ ಕೀಳರಿಮೆಯಿಂದ ನೋಡಲಾಗುತ್ತದೆ. ಹಾಗಾಗಿ ಏಡ್ಸ್ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು, ಈ ರೋಗದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಏಡ್ಸ್ ದಿನದ ಇತಿಹಾಸವೇನು?
ವಿಶ್ವ ಏಡ್ಸ್ ದಿನವನ್ನು ಮೊದಲಿಗೆ 1988 ರಲ್ಲಿ ಆಚರಿಸಲಾಯಿತು. 1981 ರಲ್ಲಿ ಮೊದಲ ಬಾರಿಗೆ ಏಡ್ಸ್ ಪ್ರಕರಣವೊಂದು ವರದಿಯಾದ ಬಳಿಕ ನಂತರದ ವರ್ಷಗಳಲ್ಲಿ ಹಲವಾರು ಜನರು ಈ ಕಾಯಿಲೆಗೆ ತುತ್ತಾಗಿ ಪ್ರಾಣವನ್ನು ಕಳೆದುಕೊಂಡರು. ಹಾಗಾಗಿ ಈ ಗಂಭೀರ ಕಾಯಿಲೆಯ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಮತ್ತು ಸಮಾಜದಲ್ಲಿ ಈ ಕಾಯಿಲೆಗೆ ಸಂಬಂಧಿಸಿದ ತಪ್ಪು ಕಲ್ಪನೆಗಳನ್ನು ತೊಡೆದುಹಾಕಬೇಕು ಎನ್ನುವ ಉದ್ದೇಶದಿಂದ 1987 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದ್ದ ಥಾಮಸ್ ನೆಟ್ಟರ್ ಮತ್ತು ಜೇಮ್ಸ್ ಡಬ್ಲ್ಯೂ ಬನ್ ಈ ಇಬ್ಬರು ಏಡ್ಸ್ ದಿನವನ್ನು ಆಚರಿಸುವ ಬಗ್ಗೆ ಪ್ರಸ್ತಾಪವನ್ನು ಮಾಡುತ್ತಾರೆ. ಅದರ ಮಾರನೇ ವರ್ಷವೇ ವಿಶ್ವ ಆರೋಗ್ಯ ಸಂಸ್ಥೆಯು ಈ ದಿನವನ್ನು ವಿಶ್ವ ಮಟ್ಟದಲ್ಲಿ ಆಚರಿಸಲು ಘೋಷಿಸಿತು.
ವಿಶ್ವ ಏಡ್ಸ್ ದಿನದ ಮಹತ್ವವೇನು?
- ವಿಶ್ವ ಏಡ್ಸ್ ದಿನವು ಎಚ್ಐವಿ ಸೋಂಕು, ಅದರ ಕಾರಣಗಳು, ಲಕ್ಷಣಗಳು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ.
- ಇದಲ್ಲದೆ ಈ ದಿನವು ಏಡ್ಸ್ ರೋಗಕ್ಕೆ ತುತ್ತಾದವರು ಸಮಾಜದಲ್ಲಿ ಯಾವುದೇ ತಾರತಮ್ಯವಿಲ್ಲದೆ ಸುರಕ್ಷಿತ ಜೀವನ ನಡೆಸುವಂತಾಗಬೇಕು ಮತ್ತು ಈ ಮಾರಕ ರೋಗದ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ತೊಡೆದುಹಾಕಬೇಕು ಎನ್ನುವ ಉದ್ದೇಶವನ್ನು ಸಹ ಹೊಂದಿದೆ.
- ಹೆಚ್.ಐ.ವಿ ಸೋಂಕು ಹೇಗೆ ಹರಡುತ್ತದೆ?ಹೆಚ್.ಐ.ವಿ ಸೋಂಕು ಹರಡಲು, ಏಡ್ಸ್ ರೋಗಕ್ಕೆ ಅಸುರಕ್ಷಿತ ದೈಹಿಕ ಸಂಪರ್ಕ ಮಾತ್ರವೇ ಕಾರಣ ಎಂಬ ತಪ್ಪು ಕಲ್ಪನೆಯಿದೆ. ಆದರೆ ಇದು ಮಾತ್ರವಲ್ಲದೆ ಈ ಸೋಂಕು ಹರಡಲು ಇನ್ನೂ ಹಲವಾರು ಕಾರಣಗಳಿವೆ.
- ಸೋಂಕು ತಗುಲಿರುವ ವ್ಯಕ್ತಿಯ ಜೊತೆಗೆ ಲೈಂಗಿಕ ಸಂಪರ್ಕ ಮಾಡುವುದರಿಂದಲೂ ಈ ಕಾಯಿಲೆ ಬರುತ್ತದೆ.
- ಸೋಂಕು ತಗುಲಿದ ವ್ಯಕ್ತಿಯ ರಕ್ತವನ್ನು ಇನ್ನೊಬ್ಬ ವ್ಯಕ್ತಿ ದಾನವಾಗಿ ಪಡೆದರೆ, ಆ ರಕ್ತದ ಮೂಲಕ ವ್ಯಕ್ತಿಯ ದೇಹಕ್ಕೂ ಸೋಂಕು ಹರಡುವ ಸಾಧ್ಯತೆ ಇರುತ್ತದೆ.
- ಸೋಂಕಿತ ವ್ಯಕ್ತಿಗೆ ಬಳಸಿದ ಸಿರಿಂಜ್ಗಳು ಅಥವಾ ಇತರೆ ಇಂಜೆಕ್ಷನ್ ಉಪಕರಣಗಳನ್ನು ಇನ್ನೊಬ್ಬ ವ್ಯಕ್ತಿಗೆ ಬಳಸಿದರೂ ಸೋಂಕು ಹರಡುತ್ತದೆ.
- ಹೆ.ಐ.ವಿ ಸೋಂಕಿತ ತಾಯಿಯಿಂದ ಗರ್ಭಾವಸ್ಥೆಯಲ್ಲಿ ಅಥವಾ ಹೆರಿಗೆಯ ನಂತರ ಹಾಲುಣಿಸುವ ಸಮಯದಲ್ಲಿ ಮಗುವಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ.
- ಟ್ಯಾಟೂ ಹಾಕಿಸಿಕೊಳ್ಳುವುದರಿಂದಲೂ ಹೆಚ್.ಐ.ವಿ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಅಂದರೆ ಒಬ್ಬರಿಗೆ ಬಳಸಿದ ಸೂಜಿಯನ್ನು ಇನ್ನೊಬ್ಬರಿಗೆ ಬಳಸಿದಾಗ ಇದರಿಂದಲೂ ಸೋಂಕು ಹರಡುವ ಸಾಧ್ಯತೆ ಇರುತ್ತದೆ.









