ಧರ್ಮಸ್ಥಳ ಬುರುಡೆ ಕೇಸ್ ದೇಶದಾದ್ಯಂತ ಸಂಚಲನ ಸೃಷ್ಟಿಸಿತ್ತು. ಎಸ್ಐಟಿ ತನಿಖೆ ಮಾಡುತ್ತಿತ್ತು. ಆದರೆ ತನಿಖೆಯನ್ನ ಅನುಮಾನಿಸಿ ಚಿನ್ನಯ್ಯ ಹೈಕೋರ್ಟ್ ಮೆಟ್ಟಿಲೇರಿ, ರಿಟ್ ಅರ್ಜಿ ಸಲ್ಲಿಸಿದ್ದ. ಆ ಮೂಲಕ ಪ್ರಕರಣ ಮತ್ತೊಂದು ಹಂತಕ್ಕೆ ತಲುಪಿತ್ತು. ಬಳಿಕ ನಟ ಪ್ರಕಾಶ್ ರಾಜ್ ಹೆಸರು ಕೇಳಿಬಂದಿತ್ತು. ಇದೀಗ ಪ್ರಕಣರ ಮತ್ತೊಂದು ಹಂತಕ್ಕೆ ಹೋಗಿದ್ದು, ಚಕ್ರವರ್ತಿ ಸೂಲಿಬೆಲೆ, ವಸಂತ್ ಗಿಳಿಯಾರ್ ಸುದ್ದಿಗೋಷ್ಠಿ ಮಾಡಿ, SIT ಮಧ್ಯಂತರ ವರದಿ ಬಹಿರಂಗ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ, ಅಪಪ್ರಚಾರ ಪ್ರಕರಣದಲ್ಲಿ ಅನೇಕರ ಚಾರಿತ್ರ್ಯ ಹನನವನ್ನು ನೋಡಿದ್ದೇವೆ. ಇಂದು ಷಡ್ಯಂತ್ರ ಹೊರ ಬಂದಿದೆ. ಅದೇ ರೀತಿ ರಾಜ್ಯದ ಬೇರೆ ಬೇರೆ ಹಿಂದೂ ಧಾರ್ಮಿಕ ಕ್ಷೇತ್ರಗಳ ಬಗ್ಗೆ ಷಡ್ಯಂತ್ರ ನಡೆದಿತ್ತು. ಬೇರೆ ಬೇರೆ ಮೂಲಗಳಿಂದ ಹಣದ ಬಂದಿತ್ತು. ನಾವು ಜನಾಗ್ರಹ ಸಭೆಗಳನ್ನು ಮಾಡುತ್ತೇವೆ. ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ ಕೇಂದ್ರ ಸರ್ಕಾರದ ಬಳಿ ಹೋಗುತ್ತೇವೆ ಎಂದು ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಹೇಳಿದ್ದಿಷ್ಟು
ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ, ಅಪಪ್ರಚಾರ ಆರೋಪ ವಿಚಾರವಾಗಿ ಇಂದು ನಗರದಲ್ಲಿ ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ಒಂದು ತಂಡ ಸಿದ್ದರಾಮಯ್ಯನ ಸುತ್ತಮುತ್ತ ಓಡಾಡಿಕೊಂಡು ಎಸ್ಐಟಿ ರಚನೆ ಮಾಡಿಸಿದ್ದರು. ನನಗೆ ಆಮಿಷ ಒಡ್ಡಲಾಯಿತು ಅಂತಾ ಕೋರ್ಟ್ನಲ್ಲಿ ಚಿನ್ನಯ್ಯ ಹೇಳುತ್ತಿದ್ದಾನೆ. ಇದು ನೇರವಾಗಿ ಸರ್ಕಾರದ ಮೇಲೆ ಆರೋಪ ಮಾಡಲಾಗುತ್ತಿದೆ. ಇದು ಕೇವಲ ಸರ್ಕಾರಕ್ಕೆ ಮೋಸ ಅಲ್ಲ, 7 ಕೋಟಿ ಜನರಿಗೆ ಮಾಡುತ್ತಿರುವ ಮೋಸ ಎಂದರು.
ಇನ್ನು ನಿನ್ನ ತಬ್ಬಿಕೊಳ್ಳುತ್ತೇನೆ ಎಂದು ಚಿನ್ನಯ್ಯಗೆ ನಟ ಪ್ರಕಾಶ್ ರಾಜ್ ಹೇಳಿದ್ದರಂತೆ. ಅವರ ಉದ್ದೇಶ ಏನಿತ್ತು, ಏಕೆ ಹಾಗೆ ಹೇಳಿದ್ದಾರೆ ಗೊತ್ತಿಲ್ಲ. ಚಿನ್ನಯ್ಯನಿಗೆ ಪ್ರೇರಣೆ ಕೊಟ್ಟ ಪ್ರಕಾಶ್ ರಾಜ್ ವೀರೇಂದ್ರ ಹೆಗ್ಗಡೆಗೆ ಜಂಟಲ್ ಮ್ಯಾನ್ ಎನ್ನುತ್ತಾರೆ. ಜನರ ಆಸ್ತಿಕತೆಯ ಮೇಲೆ ಆಗಿರುವ ಆಘಾತಕ್ಕೆ ಪ್ರಕಾಶ್ ರಾಜ್ ಕ್ಷಮೆ ಕೇಳುತ್ತಾರಾ? ಪ್ರಕಾಶ್ ರಾಜ್ ಕರೆ ಮಾಡಿದ್ದನ್ನು ವರದಿಯಲ್ಲಿ ದಾಖಲಿಸಿದ್ದಾರಾ? ರಾಜ್ಯ ಸರ್ಕಾರ SIT ಮಧ್ಯಂತರ ವರದಿ ಬಹಿರಂಗ ಮಾಡಬೇಕು ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.



