ನವದೆಹಲಿ: ಪೋಷಕರಾಗಲಿ, ಶಿಕ್ಷಕರಾಗಲಿ ವಿದ್ಯಾರ್ಥಿಗಳಿಗೆ ಹೇಳುವ ಒಂದು ಮಾತು ನಮಗೆಲ್ಲರಿಗೂ ಗೊತ್ತಿರುವ ಹಾಗೆ ” ಈಗ ಕಷ್ಟಪಟ್ಟು ಓದಿ, ಒಂದಷ್ಟು ತ್ಯಾಗ ಮಾಡಿ, ಮುಂದೆ ನಿಮಗೆ ಖಂಡಿತಾ ನ್ಯಾಯಯುತವಾದ ಪ್ರತಿಫಲ ಸಿಗುತ್ತೆ.” ಅಂತ.
ಆದರೆ, 2026ರ ಸಿಬಿಎಸ್ಇ 12ನೇ ತರಗತಿಯ ಡಿಜಿಟಲ್ ಮೌಲ್ಯಮಾಪನದಲ್ಲಿ ಆದ ಸಮಸ್ಯೆ ಈ ನಂಬಿಕೆಯನ್ನು ಸಂಪೂರ್ಣವಾಗಿ ನುಚ್ಚುನೂರು ಮಾಡಿದೆ. ಆನ್-ಸ್ಕ್ರೀನ್ ಮಾರ್ಕಿಂಗ್ ವ್ಯವಸ್ಥೆಯ ಮೂಲಕ ಶುರುವಾದ “ಆಧುನೀಕರಣ” ಯೋಜನೆಯು ಇದೀಗ ಮಕ್ಕಳಿಗೆ ಭಾರತದ ಶಿಕ್ಷಣ ವ್ಯವಸ್ಥೆಯ ಮೇಲಿರುವ ನಂಬಿಕೆಯನ್ನೇ ಕಳೆದುಕೊಳ್ಳುವಂತೆ ಮಾಡಿದೆ.
ಇದರಲ್ಲಿ ಕೇವಲ ಬ್ಲರ್ ಸ್ಕ್ಯಾನ್ಗಳು ಕಾಪಿಗಳು, ಕ್ರ್ಯಾಶ್ ಆದ ಪೋರ್ಟಲ್ಗಳು ಅಥವಾ ಅದಲು-ಬದಲಾದ ಉತ್ತರ ಪತ್ರಿಕೆಗಳ ಸಮಸ್ಯೆಯಾಗಿರಲಿಲ್ಲ. ವರ್ಷಗಳ ನಿದ್ದೆಗೆಟ್ಟ ರಾತ್ರಿಗಳು, ಕೋಚಿಂಗ್ ಸೆಂಟರ್ಗಳ ತೀವ್ರ ಒತ್ತಡ, ಪೋಷಕರ ನಿರೀಕ್ಷೆಗಳು ಮತ್ತು ಮಾನಸಿಕ ಆಯಾಸದ ನಂತರ, ತಮ್ಮ ಭವಿಷ್ಯವನ್ನು ನಿರ್ಧರಿಸುವ ಮೌಲ್ಯಮಾಪನ ವ್ಯವಸ್ಥೆಯೇ ವಿಶ್ವಾಸಾರ್ಹವಲ್ಲ ಎಂಬ ಕಟುಸತ್ಯ ಲಕ್ಷಾಂತರ ವಿದ್ಯಾರ್ಥಿಗಳಿಗೆ ಈಗ ಅರಿವಾಗಿದೆ.
ಶಿಕ್ಷಣ ವ್ಯವಸ್ಥೆಯ ಮೇಲಿದ್ದ ವಿಶ್ವಾಸವೇ ಕುಸಿತ!
ಭಾರತದ ಪರೀಕ್ಷಾ ವ್ಯವಸ್ಥೆ ಈಗಾಗಲೇ ಹಲವು ಟೀಕೆಗಳಿಗೆ ಒಳಗಾಗಿದೆ. ಅದರಲ್ಲಿ ಈಗ ಈ ತಾಂತ್ರಿಕ ದೋಷ ಬೇರೆ. ಇದಕ್ಕಿಂತ ಕೆಟ್ಟದಾಗಿರಲು ಮತ್ತೇನು ಸಾಧ್ಯಲಿಲ್ಲ. ನೀಟ್-ಯುಜಿ ಹಗರಣ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ, ಪೇಪರ್ ಲೀಕ್ ವಿವಾದಗಳಿಂದ ಭಾರತದ ಶಿಕ್ಷಣ ವ್ಯವಸ್ಥೆ ಈಗಾಗಲೇ ತತ್ತರಿಸಿ ಹೋಗಿದೆ. ಒಂದು ಬಿಕ್ಕಟ್ಟಿನಿಂದ ವಿದ್ಯಾರ್ಥಿಗಳು ಚೇತರಿಸಿಕೊಳ್ಳುವ ಮುನ್ನವೇ, ದೇಶದ ಅತಿದೊಡ್ಡ ಶಾಲಾ ಮಂಡಳಿಯಾದ ಸಿಬಿಎಸ್ಇಯೊಳಗೆ ಮತ್ತೊಂದು ಬಿಕ್ಕಟ್ಟು ಎದುರಾಗಿದೆ. ಬೋರ್ಡ್ ಪರೀಕ್ಷೆಗಳು ತುಂಬ ನಂಬಲಾರ್ಹ, ವಸ್ತುನಿಷ್ಠ ಮತ್ತು ಅರ್ಹತೆ ಆಧಾರಿತ ಎಂದು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಹೇಳಲಾಗುತ್ತಿತ್ತು. ಆದರೆ 2026ರಲ್ಲಿ ಸಾವಿರಾರು ವಿದ್ಯಾರ್ಥಿಗಳು ಡಿಜಿಟಲ್ ಪೋರ್ಟಲ್ಗೆ ಲಾಗ್ ಇನ್ ಆದಾಗ, ಓದಲಾಗದ ಸ್ಕ್ಯಾನ್ಗಳು, ಮೌಲ್ಯಮಾಪನ ಮಾಡದ ಉತ್ತರಗಳು, ಕಾಣೆಯಾದ ಪುಟಗಳು ಕಂಡುಬಂದವು!
ಮತ್ತೊಂದು ಪ್ರಕರಣದಲ್ಲಿ, ಒಬ್ಬ ವಿದ್ಯಾರ್ಥಿಯ ಉತ್ತರ ಪತ್ರಿಕೆಯನ್ನು ಇನ್ನೊಬ್ಬರ ರೋಲ್ ನಂಬರ್ಗೆ ಹಾಕಲಾಗಿತ್ತು. ಈ ಒಂದೇ ಘಟನೆಯು ವ್ಯವಸ್ಥೆಯ ಮೇಲಿದ್ದ ನಿಖರತೆಯ ಭ್ರಮೆಯನ್ನು ನಾಶಪಡಿಸಿತು. ರಾಷ್ಟ್ರೀಯ ಮಂಡಳಿಯ ವ್ಯವಸ್ಥೆಯೊಂದರಲ್ಲಿ ಭೌತಶಾಸ್ತ್ರದ ಪತ್ರಿಕೆಯನ್ನು ಇಷ್ಟು ಸುಲಭವಾಗಿ ಅದಲು-ಬದಲು ಮಾಡಬಹುದಾದರೆ, ವಿದ್ಯಾರ್ಥಿಗಳು ಇನ್ಯಾವುದನ್ನು ತಾನೇ ನಂಬಬೇಕು?

ತಂತ್ರಜ್ಞಾನ ವಿಫಲವಾಗುತ್ತದೆ, ಸರ್ವರ್ಗಳು ಕ್ರ್ಯಾಶ್ ಆಗುತ್ತವೆ, ಸಾಫ್ಟ್ವೇರ್ ದೋಷಗಳು ಸಂಭವಿಸುತ್ತವೆ ಎಂಬುದು ಎಲ್ಲರಿಗೂ ತಿಳಿದಿದೆ. ಸಿದ್ಧತೆಯ ಕೊರತೆಯಿಂದಾಗಿ ಇಂತಹದ್ದೇಲ್ಲ ಸಂಭವಿಸುತ್ತದೆ. ಸಿಬಿಎಸ್ಇ ಯಾವುದೇ ಸಣ್ಣ ಪ್ರಾಯೋಗಿಕ ಯೋಜನೆಯನ್ನು ಪರಿಚಯಿಸಲಿಲ್ಲ. ಜಗತ್ತಿನ ಅತ್ಯಂತ ದೊಡ್ಡ ಶೈಕ್ಷಣಿಕ ವ್ಯವಸ್ಥೆಗಳಲ್ಲಿ ಒಂದಾದ ಇದರಲ್ಲಿ, ಸುಮಾರು ಒಂದು ಕೋಟಿ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಅದು ಏಕಾಏಕಿ ಡಿಜಿಟಲೀಕರಣಗೊಳಿಸಿತು. ಫಲಿತಾಂಶದ ಬಳಿಕ ಪಾರದರ್ಶಕತೆಗೆ ಆಗ್ರಹಿಸಿ ವಿದ್ಯಾರ್ಥಿಗಳು ಮುಗಿಬಿದ್ದಾಗ, ಆ ಟ್ರಾಫಿಕ್ ಅನ್ನು ನಿಭಾಯಿಸಲು ಮೂಲಸೌಕರ್ಯ ಅಸಮರ್ಥವಾಗಿತ್ತು.
ಸಿಬಿಎಸ್ಇ ವೆಬ್ಸೈಟ್ ಕುಸಿತ, ಪಾವತಿ ವಿಫಲತೆ ಹಾಗೂ ಒಂದಕ್ಕಿಂತ ಹೆಚ್ಚು ಬಾರಿ ಶುಲ್ಕ ಕಡಿತದಂತಹ ಸಮಸ್ಯೆಗಳಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು. ಕಾಲೇಜು ಪ್ರವೇಶ ಮತ್ತು ವಿದ್ಯಾರ್ಥಿವೇತನಕ್ಕೆ ಅಗತ್ಯವಿರುವ ಪ್ರಮುಖ ದಾಖಲೆಗಳ ಮಂಜಾದ ಸ್ಕ್ಯಾನ್ ಪ್ರತಿಗಳನ್ನು ಸಿಸ್ಟಮ್ಗೆ ಅಪ್ಲೋಡ್ ಮಾಡಲಾಗಿತ್ತು. ಇದು ಕೇವಲ ತಾಂತ್ರಿಕ ದೋಷವಾಗಿರದೆ, ಮುನ್ನೆಚ್ಚರಿಕೆ ವಹಿಸದ ಮಂಡಳಿಯ ಬೇಜವಾಬ್ದಾರಿತನವನ್ನು ತೋರಿಸುತ್ತದೆ. ನಮ್ಮ ಶಿಕ್ಷಣ ಮಂಡಳಿಗಳು ಡಿಜಿಟಲ್ ಕ್ರಾಂತಿ ಮತ್ತು ‘ಎಐ’ ಬಗ್ಗೆ ಮಾತನಾಡುತ್ತವೆ; ಆದರೆ, ಸೂಕ್ತ ಸಿದ್ಧತೆ ಇಲ್ಲದ ತಂತ್ರಜ್ಞಾನವು ಕೇವಲ ಆಡಳಿತಾತ್ಮಕ ನಿರ್ಲಕ್ಷ್ಯ ಎಂಬುದನ್ನು ಈ ಸಿಬಿಎಸ್ಇ ಬಿಕ್ಕಟ್ಟು ಸಾಬೀತುಪಡಿಸಿದೆ.
ಶೈಕ್ಷಣಿಕ ನಷ್ಟಕ್ಕಿಂತ ಮಾನಸಿಕ ಹಾನಿಯೇ ಹೆಚ್ಚು!
ಅಂಕಗಳನ್ನು ಆಮೇಲೆ ಸರಿಪಡಿಸಬಹುದು, ಆದರೆ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯವನ್ನಲ್ಲ. 2026ರ ಈ ಬಿಕ್ಕಟ್ಟಿನಿಂದಾಗಿ, ಈ ಕಳಪೆ ವ್ಯವಸ್ಥೆಯ ಕಾರಣಕ್ಕೆ ವಿದ್ಯಾರ್ಥಿಗಳು ತಮ್ಮದೇ ಸಾಮರ್ಥ್ಯವನ್ನು ಅನುಮಾನಿಸುವಂತಾಯಿತು. ಹೆಚ್ಚು ಅಂಕ ಪಡೆಯುತ್ತಿದ್ದ ಮಕ್ಕಳು ಕೂಡ ತಾವು ಫೇಲಾಗಿದ್ದೇವೆ ಎಂದು ಆತಂಕಗೊಂಡರು, ಪೋಷಕರೂ ಕಂಗಾಲಾದರು. ಉದಾಹರಣೆಗೆ, ದೆಹಲಿಯ ವಿದ್ಯಾರ್ಥಿ ವೇದಾಂತ್ ಶ್ರೀವಾಸ್ತವ ತನ್ನ ಭೌತಶಾಸ್ತ್ರ ಪತ್ರಿಕೆಯಲ್ಲಿದ್ದ ಕೈಬರಹ ತನ್ನದಲ್ಲ ಎಂದು ಧ್ವನಿ ಎತ್ತಿದಾಗ ಆತನಿಗೆ ನ್ಯಾಯ ಸಿಗಬೇಕಿತ್ತು. ಆದರೆ, ಆತನ ಸೋಷಿಯಲ್ ಮೀಡಿಯಾ ಪ್ರೊಫೈಲ್ನಲ್ಲಿದ್ದ ಸ್ಥಳದ ಟ್ಯಾಗ್ ನೋಡಿ ಆನ್ಲೈನ್ನಲ್ಲಿ ಆತನನ್ನು “ಪಾಕಿಸ್ತಾನಿ” ಎಂದು ನಿಂದಿಸಲಾಯಿತು. ಹೀಗೆ ನ್ಯಾಯ ಕೇಳಿದ ವಿದ್ಯಾರ್ಥಿಯನ್ನು ಈ ವ್ಯವಸ್ಥೆಯು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಎರಡು ಬಾರಿಯೂ ಸೋಲಿಸಿತು.

ಶಿಕ್ಷಣ ಭಯದ ಯಂತ್ರವಾಗಿದೆ!
ಸಿಬಿಎಸ್ಇ ಯಡವಟ್ಟು ಭಾರತದ ವಿದ್ಯಾರ್ಥಿಗಳು ಮಾನಸಿಕವಾಗಿ ಎಷ್ಟು ಕಷ್ಟದಲ್ಲಿದ್ದಾರೆ ಎಂಬುದನ್ನು ತೋರಿಸಿದೆ. ಇಂದು ಬೋರ್ಡ್ ಪರೀಕ್ಷೆಗಳು ಕೇವಲ ಅಂಕಗಳನ್ನು ತಿಳಿಸುವುದಿಲ್ಲ, ಬದಲಿಗೆ ಸಮಾಜದಲ್ಲಿ ವಿದ್ಯಾರ್ಥಿಯ ಯೋಗ್ಯತೆಯನ್ನು ನಿರ್ಧರಿಸುವ ತೀರ್ಪಿನಂತಾಗಿವೆ. ಇಡೀ ಕುಟುಂಬದ ಗೌರವ, ಕಾಲೇಜು ಪ್ರವೇಶ ಮತ್ತು ಮಗುವಿನ ಭವಿಷ್ಯ ಈ ಅಂಕಪಟ್ಟಿಯ ಮೇಲೆಯೇ ನಿರ್ಧಾರವಾಗುವುದರಿಂದ, ವ್ಯವಸ್ಥೆಯ ಸಣ್ಣ ತಾಂತ್ರಿಕ ತಪ್ಪೂ ದೊಡ್ಡ ಆಘಾತ ತರುತ್ತದೆ. “ನಮ್ಮ ಪತ್ರಿಕೆಯನ್ನು ಸರಿಯಾಗಿ ಮೌಲ್ಯಮಾಪನ ಮಾಡಲಾಗಿದೆ ಎಂದು ನಂಬುವುದು ಹೇಗೆ?” ಎಂಬ ವಿದ್ಯಾರ್ಥಿಗಳ ಪ್ರಶ್ನೆಯೇ ಶಿಕ್ಷಣ ಇಲಾಖೆಯನ್ನು ಎಚ್ಚರಿಸಬೇಕಿದೆ. ಏಕೆಂದರೆ, ಪರೀಕ್ಷಾ ವ್ಯವಸ್ಥೆಯು ಕೇವಲ ಸರ್ವರ್ಗಳಿಂದ ನಡೆಯುವುದಿಲ್ಲ, ವಿದ್ಯಾರ್ಥಿಗಳ ‘ನಂಬಿಕೆ’ಯಿಂದ ನಡೆಯುತ್ತದೆ.
ಭಾರತವು ಶಿಕ್ಷಣ, ನೇಮಕಾತಿ ಮತ್ತು ಆಡಳಿತವನ್ನು ವೇಗವಾಗಿ ಡಿಜಿಟಲ್ಮಯ ಮಾಡುತ್ತಿದೆ. ಆದರೆ ಜವಾಬ್ದಾರಿ ಇಲ್ಲದ ಡಿಜಿಟಲೀಕರಣವು ವ್ಯವಸ್ಥೆಯನ್ನು ವೇಗಗೊಳಿಸಬಹುದೇ ಹೊರತು ನ್ಯಾಯ ಒದಗಿಸುವುದಿಲ್ಲ. ಈ ಬಿಕ್ಕಟ್ಟು ದೇಶದ ಪ್ರತಿಯೊಂದು ಪರೀಕ್ಷಾ ಸಂಸ್ಥೆಗೂ ಒಂದು ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ. ಸಿಬಿಎಸ್ಇ ಮುಂದೆ ಅಂಕಗಳನ್ನು ಸರಿಪಡಿಸಬಹುದು ಅಥವಾ ಹಣವನ್ನು ಹಿಂತಿರುಗಿಸಬಹುದು; ಆದರೆ, “ನಾವು ಎಲ್ಲವನ್ನೂ ಸರಿಯಾಗಿ ಮಾಡಿದರೂ ವ್ಯವಸ್ಥೆ ನಮ್ಮನ್ನು ಕೈಬಿಡಬಹುದು” ಎಂಬ ಕಹಿ ಸತ್ಯವನ್ನು 2026ರ ವಿದ್ಯಾರ್ಥಿಗಳ ಬ್ಯಾಚ್ ಎಂದಿಗೂ ಮರೆಯುವುದಿಲ್ಲ.
news source: oneindia





