ನವದೆಹಲಿ, ಸೆ. 21: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಜಾತಿ ಆಧಾರಿತ ತಾರತಮ್ಯವನ್ನು “ಹಿಂದೂ ಸಮಾಜಕ್ಕೆ ಅಂಟಿದ ಕಳಂಕ” ಎಂದು ಟೀಕಿಸಿದ್ದು, ಇಂತಹ ಭೇದಭಾವಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಮಾಜಕ್ಕೆ ಕರೆ ನೀಡಿದ್ದಾರೆ. ಮಧ್ಯಪ್ರದೇಶದ ಭೋಪಾಲ್ನ ಲಾಲ್ ಪರೇಡ್ ಮೈದಾನದಲ್ಲಿ ನಡೆದ ಆರ್ಎಸ್ಎಸ್ ಶತಮಾನೋತ್ಸವ ವರ್ಷದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಹುಟ್ಟಿನ ಆಧಾರದ ಮೇಲೆ ತಾರತಮ್ಯ ಮಾಡುವುದು ಹಿಂದೂ ಸಂಸ್ಕೃತಿಯ ಭಾಗವಲ್ಲ. ಇಂತಹ ಜಾತಿಯ ಭೇದಭಾವಗಳು ಸಮಾಜವನ್ನು ಒಳಗಿನಿಂದಲೇ ದುರ್ಬಲಗೊಳಿಸುತ್ತವೆ ಎಂದಿದ್ದಾರೆ.


“ನಾವೆಲ್ಲರೂ ಭಾರತಾಂಬೆಯ ಮಕ್ಕಳು. ನಾವೆಲ್ಲರೂ ದೇವರ ಮಕ್ಕಳು. ಆದ್ದರಿಂದ, ಮಾನವರ ನಡುವೆ ಯಾವುದೇ ರೀತಿಯ ತಾರತಮ್ಯ ಇರಬಾರದು” ಎಂದು ಭಾನುವಾರ ಭೋಪಾಲ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ದತ್ತಾತ್ರೇಯ ಹೊಸಬಾಳೆ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.
ಸಮಾಜ ಒಗ್ಗೂಡಬೇಕಾದರೆ ಜಾತಿ, ಪಂಥ, ಭಾಷೆ, ಪ್ರಾಂತ್ಯ (ಉತ್ತರ ಭಾರತ ಅಥವಾ ದಕ್ಷಿಣ ಭಾರತ) ಎಂಬ ಆಂತರಿಕ ಭಿನ್ನಾಭಿಪ್ರಾಯಗಳನ್ನು ಮರೆಯಬೇಕು. ಪ್ರತಿಯೊಂದು ಬೆರಳಿಗೂ ತನ್ನದೇ ಶಕ್ತಿಯಿರುತ್ತದೆ. ಆದರೆ ನಾಲ್ಕೂ ಬೆರಳುಗಳು ಒಟ್ಟಿಗೆ ಬಂದು ಹೆಬ್ಬೆರಳು ಅವುಗಳ ಮೇಲಿಟ್ಟಾಗ ಮೂಡುವ ‘ಬಿಗಿಮುಷ್ಟಿ’ಯ ಸಂಘಟಿತ ಶಕ್ತಿಯೇ ನೈಜ ಶಕ್ತಿ ಎಂದು ಸಂಘಟನೆಯ ಮಹತ್ವವನ್ನು ಅವರು ವಿವರಿಸಿದರು.
ಹುಟ್ಟಿನ ಆಧಾರದ ಮೇಲಿನ ತಾರತಮ್ಯ ಹಿಂದೂ ಸಂಸ್ಕೃತಿಯ ಭಾಗವಲ್ಲ:
“ಹುಟ್ಟಿನ ಆಧಾರದ ಮೇಲಿನ ತಾರತಮ್ಯ ಹಿಂದೂ ಸಂಸ್ಕೃತಿಯ ಭಾಗವಲ್ಲ” ಎಂದ ಅವರು, ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ನಡೆಯುವ ನಾನಾ ರೀತಿಯ ಕೆಟ್ಟ ವರ್ತನೆಗಳು ಸಮಾಜವನ್ನು ದುರ್ಬಲಗೊಳಿಸುತ್ತವೆ ಮತ್ತು ಒಳಗಿನಿಂದಲೇ ಟೊಳ್ಳು ಮಾಡುತ್ತವೆ ಎಂದಿದ್ದಾರೆ. “ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ನಡೆಯುವ ವಿವಿಧ ರೀತಿಯ ದುಷ್ಟ ವರ್ತನೆಗಳು ಸಮಾಜವನ್ನು ಕ್ಷೀಣಗೊಳಿಸುತ್ತವೆ, ದುರ್ಬಲಗೊಳಿಸುತ್ತವೆ ಮತ್ತು ಟೊಳ್ಳು ಮಾಡುತ್ತವೆ” ಎಂದು ಹೊಸಬಾಳೆ ಹೇಳಿದ್ದಾರೆ.
‘ನಾವು ಜಾತಿಯ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ’ ಎಂದು ಜಾತಿ ಆಧಾರಿತ ತಾರತಮ್ಯದ ವಿರುದ್ಧ ಪ್ರತಿಯೊಬ್ಬರೂ ವೈಯಕ್ತಿಕ ಸಂಕಲ್ಪ ಮಾಡುವಂತೆ ಹೊಸಬಾಳೆ ಮನವಿ ಮಾಡಿದ್ದಾರೆ. ಈ ಆಚರಣೆಯನ್ನು ಕೊನೆಗೊಳಿಸಲು ಕೇವಲ ಕಾನೂನುಗಳು ಅಥವಾ ಉಪದೇಶಗಳಿಗಿಂತ ಹೆಚ್ಚಾಗಿ ಜನರ ಸ್ವಂತ ನಡವಳಿಕೆಯನ್ನು ನೆಚ್ಚಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ.
“ಇದು ಕೇವಲ ಕಾನೂನಿನಿಂದಾಗಲಿ, ಭಗವಂತನ ಅವತಾರದಿಂದಾಗಲಿ ಅಥವಾ ಯಾರೋ ನೀಡುವ ಉಪದೇಶದಿಂದಾಗಲಿ ಬದಲಾಗುವುದಿಲ್ಲ. ಇದು ನಮ್ಮ ಸ್ವಂತ ನಡವಳಿಕೆಯಿಂದಷ್ಟೇ ಸಾಧ್ಯ” ಎಂದು ಹೊಸಬಾಳೆ ಹೇಳಿದ್ದಾರೆ.



