ಆ ಒಂದು ನೋಟಿಫಿಕೇಶನ್ನಿಂದ ತಪ್ಪಿತು ಅನಾಹುತ!; ಸೈಬರ್ ಕ್ರೈಂ ಪೊಲೀಸರಿಗೆ ಮೌಖಿಕ ದೂರು
ಕಾರ್ಕಳ: ಕಳೆದ 5 ವರ್ಷಗಳ ಹಿಂದೆ ಕಾರ್ಕಳದಲ್ಲಿ ಆರಂಭಗೊಂಡು ಮನೆ ಮಾತಾಗಿದ್ದ ಸ್ವಯಂ ಟೈಮ್ಸ್ ಚಾನೆಲ್ ನ್ನು ಸೈಬರ್ ವಂಚಕನೊಬ್ಬ ಮೇ 20ರ ತಡರಾತ್ರಿ ಹ್ಯಾಕ್ ಮಾಡಲು ಯತ್ನಿಸಿದ್ದು, ಚಾನೆಲ್ನ ಸಂಪಾದಕರಿಗೆ ಬಂದ ಆ ಒಂದು ನೋಟಿಫಿಕೇಶನ್ನಿಂದ ಅನಾಹುತವೊಂದು ತಪ್ಪಿದಂತಾಗಿದೆ.
ಹ್ಯಾಕ್ ಮಾಡಲೆತ್ನಿಸಿದ ಆರೋಪಿಯ ಮಾಹಿತಿಯನ್ನು ಸ್ವಯಂ ಟೈಮ್ಸ್ ಚಾನೆಲ್ನ ಐಟಿ ಸೆಲ್ ಸಿಬ್ಬಂದಿ ಕಲೆಹಾಕುತ್ತಿದ್ದು, ಸಾರ್ವಜನಿಕರು ಅಥವಾ ಯಾವುದೇ ಮಾಧ್ಯಮದವರು ಯೂಟ್ಯೂಬ್ ಚಾನೆಲ್ ಹೊಂದಿದ್ದರೆ ಎಚ್ಚರಿಕೆಯಲ್ಲಿರುವಂತೆ ಸ್ವಯಂ ಟೈಮ್ಸ್ ಸೂಚಿಸಿದೆ.

ಘಟನೆಯ ವಿವರ
ಕಾರ್ಕಳದ ಸ್ವಯಂ ಟೈಮ್ ತನ್ನದೇ ಆದ ವಿಶಿಷ್ಟ, ವೈವಿಧ್ಯಮಯ, ಬದ್ಧತೆಯ ವರದಿಯೊಂದಿಗೆ ಎಲ್ಲರ ಮನೆಮಾತಾಗಿ ರೂಪುಗೊಂಡಿತ್ತು. ಅತ್ಯಲ್ಪ ಅವಧಿಯಲ್ಲಿ ಸುಮಾರು 88 ಸಾವಿರಕ್ಕೂ ಮಿಕ್ಕಿ ಚಂದದಾರರನ್ನು ಹೊಂದಿದ್ದ ಸ್ವಯಂ ಟೈಮ್ಸ್ ತನ್ನದೇ ಆದ ಕಂಟೆಂಟ್ ಮೂಲಕ ಚಂದಾದಾರರ ಮನದಾಳದಲ್ಲಿ ಉಳಿಯುವಂತೆ ಮಾಡಿದೆ. ಆದರೆ ಮೇ 20ರಂದು ತಡ ರಾತ್ರಿ ಸೈಬರ್ ವಂಚಕನೊಬ್ಬನಿಂದ ಸ್ವಯಂ ಟೈಮ್ಸ್ ಚಾನೆಲ್ ನ್ನು ಸಂಪೂರ್ಣವಾಗಿ ಹ್ಯಾಕ್ ಮಾಡಿ ಅದರ ಪಾಸ್ವರ್ಡ್, ಇಮೇಲ್ ಐಡಿ, ಫೋನ್ ನಂಬರ್ ಬದಲಾಯಿಸಿ ಅದರ ಸಂಪೂರ್ಣ ಸ್ವಾಯತ್ತತೆಯನ್ನು ಆತನ ವಶಕ್ಕೆ ಪಡೆದುಕೊಂಡಿದ್ದ. ಆದರೆ ವಿಶ್ವಾಸ, ನಿಸ್ವಾರ್ಥದ ಸೇವೆಯ ದುಡಿಮೆಯ ಫಲವೆಂಬಂತೆ ಹ್ಯಾಕರ್ ಮಾಡಿದ ಸ್ವಯಂ ಟೈಮ್ಸ್ ಚಾನಲನ್ನು ಮತ್ತೆ ತನ್ನ ಸುಪರ್ದಿಗೆ ಪಡೆಯುವಲ್ಲಿ ಸ್ವಯಂ ಟೈಮ್ಸ್ ಬಳಗದ ಐ ಟಿ ಸೆಲ್ ಬಳಗ ಯಶಸ್ವಿಯಾಗಿದೆ. ಹ್ಯಾಕ್ ಆಗಿರುವ ಮಾಹಿತಿಯನ್ನು ಸೈಬರ್ ಕ್ರೈಂ ಗೆ ನೀಡಲಾಗಿದೆ. ಮೇ 21 ರಂದು ಬೆಳಿಗ್ಗೆ ಮತ್ತೊಮ್ಮೆ ಹ್ಯಾಕ್ ಮಾಡಲು ಪ್ರಯತ್ನಿಸಿದ್ದು ಇದು ಮಾತ್ರ ಅಸಾಧ್ಯವಾಗಿದೆ.





