ಬೆಳ್ತಂಗಡಿ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ತಾಲೂಕು ಆಡಳಿತ ಸೌಧದಲ್ಲಿ ಸರ್ವಜ್ಞ ಜಯಂತಿಯನ್ನು ಫೆ.20ರಂದು ಆಚರಿಸಲಾಯಿತು. ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷ ಸೋಮಯ್ಯ ಹನೈನಡೆ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ಪ್ರಧಾನ ಭಾಷಣಕಾರರಾಗಿ ವಾಣಿ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಸುಧೀರ್ ಕೆ.ಎನ್ ಮಾತನಾಡಿ, ಸಮಾಜದಲ್ಲಿರುವಂತ ಅಸಮಾನತೆ ಕೆಟ್ಟ ಪದ್ಧತಿ, ಮೂಢನಂಬಿಕೆ, ಜಾತಿ ತಾರತಮ್ಯತೆ ಗಳನ್ನು ನಿರ್ಮೂಲನೆ ಮಾಡಲು ಪಣತೊಟ್ಟ ಸರ್ವಜ್ಞರು ಕೇವಲ ಕವಿಯಾಗದೆ, ಸಮಾಜ ಸುಧಾರಕರಾಗಿದ್ದರು. 16ನೇ ಶತಮಾನದಲ್ಲಿಯೇ ಈಗಿನ ಸಮಾಜಕ್ಕೆ ಅಗತ್ಯವಿರುವ ಮಾನವೀಯ ಮೌಲ್ಯಗಳನ್ನು ತಿಳಿಸಿಕೊಟ್ಟಿರುವ ಮಹಾಪುರುಷ ಸರ್ವಜ್ಞರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯಬೇಕಿದೆ ಎಂದರು.
ತಹಶೀಲ್ದಾರ್ ಪೃಥ್ವಿ ಸಾನಿಕಂ, ಮೂಲ್ಯರ ಯಾನೆ ಕುಲಾಲರ ಸೇವಾ ಸಂಘದ ಗೌರವಾಧ್ಯಕ್ಷ ಹರೀಶ್ ಕಾರಿಂಜ, ಮೂಲ್ಯರ ಯಾನೆ ಕುಲಾಲರ ಸೇವಾ ಸಂಘದ ಪದಾಧಿಕಾರಿಗಳು ಸಹಿತ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.





