ಬೆಳ್ತಂಗಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ “ವಿಶ್ವ ತಂಬಾಕು ವಿರೋಧಿ ದಿನಾಚರಣೆ”- “ಸ್ವಾಸ್ಥ್ಯ ಸಂಕಲ್ಪ” ಕಾರ್ಯಕ್ರಮ
ಬೆಳ್ತಂಗಡಿ; ತಂಬಾಕು ಮತ್ತು ಮಾದಕ ವ್ಯಸನಗಳ ಬಗ್ಗೆ ಅತೀ ಎಚ್ಚರದಿಂದ ಇರಬೇಕಾದವರು ವಿದ್ಯಾರ್ಥಿಗಳು. ಸ್ವತಃ ನಾವು ಎಲ್ಲಾ ವ್ಯಸನಗಳಿಂದ ದೂರ ಇರುವುದಲ್ಲದೆ ಸುತ್ತಮುತ್ತಲಿನ ಪರಿಸರ ಹಾಗೂ ಸಮಾಜವನ್ನು ವ್ಯಸನ ಮುಕ್ತಗೊಳಿಸುವ ಸಂಕಲ್ಪ ಕೈಗೊಳ್ಳಬೇಕು. ಈ ಕಾರ್ಯಕ್ರಮದ ಮೂಲಕ ವ್ಯಸನ ಮುಕ್ತ ಯುವಜನತೆಯೇ ಸದೃಢ ಭಾರತದ ಕನಸು. ಆ ಕನಸು ಈಡೇರಿಕೆಯೇ ಜನಜಾಗೃತಿ ವೇದಿಕೆಯ ಸಂಕಲ್ಪ ಎಂದು ಹಿರಿಯ ಪತ್ರಕರ್ತ ಹಾಗೂ ಸ್ವಾಸ್ಥ್ಯ ಸಂಕಲ್ಪ ಸಂಪನ್ಮೂಲ ವ್ಯಕ್ತಿ ಅಚ್ಚು ಮುಂಡಾಜೆ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮೇಲಂತಬೆಟ್ಟು ಇಲ್ಲಿ ಜೂ.5 ರಂದು ನಡೆದ “ವಿಶ್ವ ತಂಬಾಕು ವಿರೋಧಿ ದಿನಾಚರಣೆ” ಹಾಗೂ “ಸ್ವಾಸ್ಥ್ಯ ಸಂಕಲ್ಪ” ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ಉಪನ್ಯಾಸ ನೀಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ನಡೆದ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಸೇವಾಯೋಜನೆ, ಯುವ ರೆಡ್ ಕ್ರಾಸ್ ಸಹಯೋಗ ನೀಡಿದರು.
ಕಾಲೇಜು ಪ್ರಚಾರ್ಯಪ್ರೊ. ಪದ್ಮನಾಭ ಕೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಮಾಹಿತಿ ದೊರೆತಿದ್ದು ಮಾದರಿ ಕಾರ್ಯಕ್ರಮ ಎಂದು ಶ್ಲಾಘಿಸಿದರು.
ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಯಶವಂತ್, ಮೇಲಂತಬೆಟ್ಟು ಗ್ರಾ.ಪಂ ಮಾಜಿ ಸದಸ್ಯ ಚಂದ್ರರಾಜ್, ಗ್ರಾ. ಯೋಜನೆಯ ಕೃಷಿ ಮೇಲ್ವಿಚಾರಕ ರಾಮ್ ಕುಮಾರ್, ಮೇಲಂತಬೆಟ್ಟು ವಿಭಾಗದ ಸೇವಾ ಪ್ರತಿನಿಧಿ ಲೀಲಾವತಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ದುಶ್ಚಟಮುಕ್ತ ಸಮಾಜ ನಿರ್ಮಾಣದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಪರಿಸರ ದಿನಾಚರಣೆ ಪ್ರಯುಕ್ತ ಎನ್ಎಸ್ಎಸ್ ಮತ್ತು ಯುವ ರೆಡ್ ಕ್ರಾಸ್ ವತಿಯಿಂದ ಕಾಲೇಜು ಆವರಣದಲ್ಲಿ ಗಿಡ ನೆಡಲಾಯಿತು. ಸಂಪನ್ಮೂಲ ವ್ಯಕ್ತಿ ಅಚ್ಚು ಮುಂಡಾಜೆಯವರನ್ನು ಸನ್ಮಾನಿಸಲಾಯಿತು.
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ರೊನಾಲ್ಡ್ ಪ್ರವೀಣ್ ಕೊರೆಯ ಸ್ವಾಗತಿಸಿದರು. ಕಾಲೇಜಿನ ಯುವ ರೆಡ್ ಕ್ರಾಸ್ ಸಂಚಾಲಕ ಡಾ. ರವಿ ಎಂ.ಎಂ ವಂದಿಸಿದರು.





