ವೇಣೂರು: ಕುಕ್ಕೇಡಿ ಗ್ರಾ.ಪಂ. ವ್ಯಾಪ್ತಿಯ ನಿಟ್ಟಡೆ ಸ.ಉ.ಪ್ರಾ. ಶಾಲೆಯ ವಾರ್ಷಿಕೋತ್ಸವ ಕಳೆದು ಬರೋಬ್ಬರಿ ಎರಡು ತಿಂಗಳು ಕಳೆದಿದೆ. ಆದರೆ ರಾಜ್ಯ ಹೆದ್ದಾರಿಬದಿಯಲ್ಲಿ ಹಾಕಲಾಗಿರುವ ಅಕ್ರಮ ಬ್ಯಾನರ್ ಮಾತ್ರ ಇನ್ನೂ ರಾರಾಜಿಸುತ್ತಿದೆ.
ಕಳೆದ ಡಿ. 20ಕ್ಕೆ ವಾರ್ಷಿಕೋತ್ಸವ ಕಾರ್ಯಕ್ರಮ ನಡೆದಿದೆ. ಈ ಹೆದ್ದಾರಿಯಲ್ಲೇ ಪಂಚಾಯತ್ ಅಧಿಕಾರಿಗಳು ದಿನಕ್ಕೆ ಹಲವು ಬಾರಿ ಆಚೆ ಈಚೆ ಓಡಾಡುತ್ತಿದ್ದರೂ ಈ ಅಕ್ರಮ ಬ್ಯಾನರ್ ಕಾಣದಿರುವುದು ಅನುಮಾನಕ್ಕೆ ಎಡೆ ಮಾಡಿದೆ. ಬ್ಯಾನರನ್ನು ತಕ್ಷಣ ತೆರವುಗೊಳಿಸುವಂತೆ ಶಾಲೆಯ ಎಸ್ಡಿಎಂಸಿಯ ಅಶ್ರಫ್ಗೆ ಪಂಚಾಯತ್ ಸಿಬ್ಬಂದಿ ಸೂಚಿಸಿದ್ದು, ಸಿಬ್ಬಂದಿ ಜೊತೆ ಉಡಾಫೆಯಾಗಿ ಉತ್ತರಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಪಂಚಾಯತ್ ವ್ಯಾಪ್ತಿಯಲ್ಲಿ ಇನ್ನೂ ಹಲವು ವಾಯಿದೆ ದಾಟಿದ ಅಕ್ರಮ ಬ್ಯಾನರ್ಗಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಪಂಚಾಯತ್ ತ್ವರಿತಕ್ರಮ ಕೈಗೊಳ್ಳಬೇಕಿದೆ.





