ಹುಬ್ಬಳ್ಳಿ: ಧಾವಂತದ ಬದುಕಿನಲ್ಲಿ ಮನುಷ್ಯ ಸಾಕಷ್ಟು ಒತ್ತಡಗಳಿಗೆ ಸಿಲುಕುತ್ತಾನೆ. ಒತ್ತಡ ನಿಭಾಯಿಸುವಲ್ಲಿ ವಿಫಲನಾದಾಗ ವಿವಿಧ ಮಾರ್ಗಗಳಲ್ಲಿ ಪ್ರಾಣ ಕಳೆದುಕೊಳ್ಳಲು ಸಹ ಮುಂದಾಗುತ್ತಾನೆ. ಅದೇ ರೀತಿ ಇಲ್ಲೊಬ್ಬ ಪ್ರಯಾಣಿಕ ಚಲಿಸುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್ನಿಂದ ಜಿಗಿದಿದ್ದಾನೆ. ಪರಿಣಾಮ ಹಿಂಬದಿಯಿಂದ ಮತ್ತೊಂದು ವಾಹನಕ್ಕೆ ಡಿಕ್ಕೆಯಾದ ಪರಿಣಾಮ ಪ್ರಾಣಬಿಟ್ಟಿದ್ದಾನೆ.
ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆ ಆಗಿಲ್ಲ. ಪ್ರಕರಣ ದಾಖಲಾಗಿದ್ದು ಘಟನೆಗೆ ಕಾರಣವೇನೆಂದು ತನಿಖೆ ನಡೆಸಲಾಗುತ್ತಿದೆ. ಕೆ.ಎಸ್.ಆರ್.ಟಿ.ಸಿ ಪುತ್ತೂರು ವಿಭಾಗ ಧರ್ಮಸ್ಥಳ ಘಟಕಕ್ಕೆ ಸೇರಿದ (ಕೆ.ಎ.21 ಎಫ್ 0247) ವೇಗದೂತ ಬಸ್ ಹುಬ್ಬಳ್ಳಿಯಿಂದ ಧರ್ಮಸ್ಥಳದತ್ತ ಶುಕ್ರವಾರ ರಾತ್ರಿ ಹೊರಟಿತ್ತು. ಈ ವೇಳೆ ಹಾವೇರಿ ಮಾರ್ಗದಲ್ಲಿ (NH48) ಗಬ್ಬೂರು ಕ್ರಾಸ್ ರಿಂಗ್ ರಸ್ತೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.
ಡಿಕ್ಕಿ ರಭಸಕ್ಕೆ ಕಾರು ಪಲ್ಟಿ, ಕೆಲವರಿಗೆ ಗಾಯ ರಾತ್ರಿ 8-30 ರ ಸಮಯದಲ್ಲಿ ಬಸ್ ಹುಬ್ಬಳ್ಳಿ ಹೊರವಲಯದಲ್ಲಿ ಗಬ್ಬೂರ ಕ್ರಾಸ್ ಮತ್ತು ಕುಂದಗೋಳ ಕ್ರಾಸ್ ನಡುವೆ ತೆರಳುತ್ತಿತ್ತು. ಬಸ್ಸಿನಿಂದ ಒಬ್ಬ ಪ್ರಯಾಣಿಕ ಏಕಾಎಕಿ ಬಸ್ಸಿನ ಹಿಂದಿನ ಬಾಗಿಲು ತೆರೆದು ರಸ್ತೆಗೆ ಜಿಗಿದಿದ್ದಾನೆ. ಬಸ್ ಹಿಂದೆ ಬರುತ್ತಿದ್ದ ಸ್ಕಾರ್ಪಿಯೋ ಕಾರು (ಕೆ.ಎ.27ಪಿ 2012) ಆತನಿಗೆ ಡಿಕ್ಕಿ ಹೊಡೆದ ಬಳಿಕ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು ಹತ್ತಿರದ ಕೆ. ಎಲ್. ಈ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ಸಿನಿಂದ ಜಿಗಿದ ವ್ಯಕ್ತಿಯ ತಲೆಗೆ ತೀವ್ರತರ ಪೆಟ್ಟಾಗಿದ್ದರಿಂದ ಸ್ಥಳದಲ್ಲಿ ಅಸುನೀಗಿದ್ದಾನೆ ಎಂದರು.
ಇನ್ನೂ ಮೃತ ವ್ಯಕ್ತಿಯ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಅಪಘಾತ ಸಂಭವಿಸಿದ ಸಮಯದಲ್ಲಿ ನಿರ್ವಾಹಕ ಪ್ರಯಾಣಿಕರಿಗೆ ಟಿಕೆಟ್ ವಿತರಿಸುವುದರಲ್ಲಿ ಮಗ್ನರಾಗಿದ್ದರು. ಮೃತ ವ್ಯಕ್ತಿ ಹುಬ್ಬಳ್ಳಿಯಿಂದ ಸುರತ್ಕಲ್ ಗೆ ಟಿಕೆಟ್ ಪಡೆದಿದ್ದ ಎಂಬುದಾಗಿ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖಾ ಮಟ್ಟದ ತನಿಖೆ ಮುಂದುವರೆದಿದೆ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ವ್ಯಕ್ತಿ ಬೇಕು ಅಂತಲೇ ಆತ್ಮಹತ್ಯೆಗೆ ಯತ್ನಿಸಿದರಾ, ಅಥವಾ ಆಯತಪ್ಪಿ ಬಿದ್ದರಾ? ಅವರ ಮಾನಸಿಕ ಸ್ಥಿತಿಗತಿ ಹೇಗಿತ್ತು. ಎಲ್ಲಿಯವರು? ಎಂಬೆಲ್ಲ ಮಾಹಿತಿ ತನಿಖೆಯಿಂದ ತಿಳಿದು ಬರಬೇಕಿದೆ.





