ನವದೆಹಲಿ: ನೀಟ್ (NEET) ಪರೀಕ್ಷಾ ಅಕ್ರಮ ಕುರಿತು ಸಂಸತ್ನಲ್ಲಿ ಚರ್ಚೆ ಅವಕಾಶ ನೀಡುವಂತೆ ಹಾಗೂ ಕೇಂದ್ರ ಸಚಿವರ ರಾಜೀನಾಮೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಯವರ ಮನೆ ಮುಂದೆ ಕಾಂಗ್ರೆಸ್ ನಾಯಕರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಕೇಂದ್ರ ಧೋರಣೆ ಹಾಗೂ ಕಾಂಗ್ರೆಸ್ನ ರಾಹುಲ್ ಗಾಂಧಿ ಬೆಂಬಲಿಸಿ ಮಾಜಿ ಸಂಸದೆ, ಸ್ಯಾಂಡಲ್ವುಡ್ ನಟಿ ರಮ್ಯಾ (ದಿವ್ಯ ಸ್ಪಂದನ) ಅವರು ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ, ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ್ದಾರೆ.

ಪ್ರಧಾನಿ ಅಹಂಕಾರ ಬದಿಗಿಡಬೇಕು: ನಟಿ ರಮ್ಯಾ ಪೋಸ್ಟ್
ನಟಿ ರಮ್ಯಾ ಅವರು, ನಾಯಕ ರಾಹುಲ್ ಗಾಂಧಿ ಅವರು ಹೇಳಿದ್ದು ಸರಿಯಾಗಿದೆ. ಸೋಮವಾರ ದೆಹಲಿಯಲ್ಲಿ ಅಮಾಯಕ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯದ ಹೊಣೆ ಹೊತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಾಗೂ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣವಾದ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಈ ಸಂಬಂಧ ಇನ್ಸ್ಟಾಗ್ರಾಮ್ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.
‘ಊಟಕ್ಕೆ ಉಪ್ಪು ಹೇಗೋ ಹಾಗೆಯೇ ರಾಜ್ಯಕ್ಕೆ ನ್ಯಾಯ’ ಬೇಕು ಎಂದು ಅವರು ಪೋಸ್ಟ್ನೊಂದಿಗೆ ಬರೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಮನಸ್ಸು ಮಾಡಿದ್ದರೆ ಇವರ ರಾಜೀನಾಮೆ ಕೆಲಸವನ್ನು ಕ್ಷಣದಲ್ಲಿಯೇ ಮಾಡಬಹುದು. ಆದರೆ ಅವರು ಅದನ್ನು ಏಕೆ ಮಾಡುತ್ತಿಲ್ಲ?. ಏಕೆಂದರೆ ಅವರಿಗೆ ಅವರಿಗೆ ದೊಡ್ಡ ಅಹಂಕಾರವಿದೆ. ಮೊದಲು ನಮ್ಮ ಅಹಂಕಾರ ತೊಡೆದು ಹಾಕುವಂತೆ ಹಿಂದೂ ಧರ್ಮದ ಬೋಧನೆಗಳಿಗೆ ತಕ್ಕಂತೆ ಇವರುಗಳು ಬದುಕುತ್ತಿಲ್ಲ ಎಂದು ಪ್ರಧಾನಿ ವಿರುದ್ಧ ಕಿಡಿ ಕಾರಿದ್ದಾರೆ. ನೀಟ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ಅವರ ಭವಿಷ್ಯ ಸುರಕ್ಷಿತವಾಗಿರಿಸಲು ಪ್ರಶ್ನಿಸುವುದು ಪ್ರತಿಭಟಿಸುವುದು ತಪ್ಪಲ್ಲ. ಅದು ಸಮರ್ಥನೀಯವಾಗಿದೆ. ಇಂದು ನಮ್ಮ ದೇಶದಲ್ಲಿನ ಅಸಮಾನತೆ ಕುರಿತು ಹೆಚ್ಚು ಆತಂಕವಿದೆ. ವಿದ್ಯಾರ್ಥಿಗಳಿಗೆ ಪ್ರತಿಭಟಿಸುವ ಎಲ್ಲ ಹಕ್ಕಿದ್ದು, ನಾನು ವಿದ್ಯಾರ್ಥಿಗಳ ಜೊತೆ ನಿಲ್ಲುತ್ತೇನೆ’ ಎಂದು ರಮ್ಯಾ ತಿಳಿಸಿದ್ದಾರೆ. ಅದಾನಿ ಮತ್ತು ಅಂಬಾನಿಗಳಿಗೆ ವಿನಾಯಿತಿ ನೀಡುವ ಪ್ರಧಾನಿ ಮೋದಿಯವರು ನಿಮ್ಮ ವಾದ ಮತ್ತು ಅಹಂಕಾರವನ್ನು ಬದಿಗಿಟ್ಟು ಸರಿಯಾಗಿ ಉತ್ತಮ ಕಾರ್ಯ ನಿರ್ವಹಣೆಗೆ ಮುಂದಾಗಬೇಕು. ಈಗಾಗಲೇ ನೀಟ್ ವಿದ್ಯಾರ್ಥಿಗಳು ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ’ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.



