ಮಜಲ್ ಬಯೋಮೆಟ್ರಿಕ್ಸ್ ಆಧಾರಿತ ಡಿಜಿಟಲ್ ಗುರುತಿನ ವ್ಯವಸ್ಥೆ; ಕಿವಿಗೆ ಟ್ಯಾಗ್ ಹಾಕುವ ಹಳೆಯ ಪದ್ಧತಿ ಇನ್ನಿಲ್ಲ
ಬೆಂಗಳೂರು, ಮೇ 22: ಜಾನುವಾರುಗಳ ಲಸಿಕೆ ದಾಖಲೆ, ಆರೋಗ್ಯ ಸ್ಥಿತಿ, ವಿಮೆ ಹಾಗೂ ಸಾವಿನ ಪರಿಹಾರ ಸಂಬಂಧಿತ ಮಾಹಿತಿಯನ್ನು ಸುಲಭವಾಗಿ ಟ್ರ್ಯಾಕ್ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಜಾನುವಾರುಗಳಿಗೆ ಮಜಲ್ ಬಯೋಮೆಟ್ರಿಕ್ಸ್ ಆಧಾರಿತ ಡಿಜಿಟಲ್ ಗುರುತಿನ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿದೆ. ಬಾರ್ಕೋಡ್ ಆಧಾರಿತ ಈ ವ್ಯವಸ್ಥೆ ಜಾನುವಾರುಗಳ ಆಧಾರ್ ಕಾರ್ಡ್ನಂತೆ ಕಾರ್ಯನಿರ್ವಹಿಸಲಿದೆ.
ಭಾರತದಲ್ಲೇ ಮೊದಲ ಪ್ರಯೋಗ
ಈ ಯೋಜನೆ ಭಾರತದಲ್ಲೇ ಮೊದಲ ಬಾರಿಗೆ ಜಾರಿಗೆ ಬರುತ್ತಿದ್ದು, ಕಿವಿಗೆ ಟ್ಯಾಗ್ ಹಾಕುವ ಹಳೆಯ ಪದ್ಧತಿಗೆ ಪರ್ಯಾಯವಾಗಲಿದೆ. ಮುಂದಿನ ದಿನಗಳಲ್ಲಿ ರೈತರು ತಮ್ಮ ಜಾನುವಾರುಗಳ ಫೋಟೋಗಳನ್ನು ಇದೇ ವ್ಯವಸ್ಥೆಯ ಮೂಲಕ ಅಪ್ಲೋಡ್ ಮಾಡುವ ಅವಕಾಶವೂ ಇರಲಿದೆ. ಇದರಿಂದ ಡಿಜಿಟಲ್ ಆರೋಗ್ಯ ಪರಿಶೀಲನೆ ಹಾಗೂ ಸರ್ಕಾರದ ಸೇವೆಗಳನ್ನು ವೇಗವಾಗಿ ಪಡೆಯಲು ನೆರವಾಗಲಿದೆ.
ಈ ಕುರಿತು ಮಾಹಿತಿ ನೀಡಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ) ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಮಾನವರ ಬೆರಳಚ್ಚಿನಂತೆಯೇ ಜಾನುವಾರುಗಳ ಮೂಗಿನ ರೇಖೆಗಳು ವಿಶಿಷ್ಟವಾಗಿರುತ್ತವೆ. ಅವುಗಳ ಆಧಾರದ ಮೇಲೆ ನಿಖರ ಗುರುತಿನ ವ್ಯವಸ್ಥೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಯೋಜನೆ ಪಶುಸಂಗೋಪನೆ ಸಂಬಂಧಿತ ಯೋಜನೆಗಳಲ್ಲಿ ನಡೆಯುವ ವಂಚನೆ ತಡೆಯಲು ಹಾಗೂ ಪಾರದರ್ಶಕತೆ ಹೆಚ್ಚಿಸಲು ಸಹಾಯವಾಗಲಿದೆ ಎಂದೂ ಅವರು ಹೇಳಿದ್ದಾರೆ.
ಈ ಯೋಜನೆಯಿಂದ ರೈತರಿಗೆ ಲಸಿಕೆ ದಿನಾಂಕಗಳ ಕುರಿತು SMS ಅಲರ್ಟ್ಗಳು ಬರಲಿವೆ. ಹೊಸದಾಗಿ ಜನಿಸಿದ ಕರುಗಳಿಗೂ ಡಿಜಿಟಲ್ ದಾಖಲೆ ಮಾಡಬಹುದಾಗಿದೆ. ಮುಂದೆ ಮೂಗಿನ ಫೋಟೋ ಸ್ಕ್ಯಾನ್ ಮಾಡುವ ಮೂಲಕ ಆರೋಗ್ಯ ತಪಾಸಣೆಯನ್ನೂ ನಡೆಸಬಹುದಾಗಿದೆ. AI ಆಧಾರಿತ ಈ ವ್ಯವಸ್ಥೆ ಪಶುಸಂಗೋಪನೆ ಕ್ಷೇತ್ರದಲ್ಲಿ ಡಿಜಿಟಲ್ ಆಡಳಿತವನ್ನು ಮತ್ತಷ್ಟು ಬಲಪಡಿಸುವ ಜೊತೆಗೆ ಜಾನುವಾರುಗಳ ಟ್ರ್ಯಾಕಿಂಗ್ ಮತ್ತು ದೃಢೀಕರಣ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿಸಲಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.





