ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪವಿತ್ರ ಪುಣ್ಯಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ 2026ರ ಲಕ್ಷ ದೀಪೋತ್ಸವವನ್ನಾ ಡಿಸೆಂಬರ್ 4ರಿಂದ 8ರವರೆಗೆ ಒಟ್ಟು ಐದು ದಿನಗಳ ಕಾಲ ಅತ್ಯಂತ ಶ್ರದ್ಧಾಭಕ್ತಿ ಹಾಗೂ ವೈಭವದಿಂದ ಜರುಗಲಿದೆ.
ಈ ಐದು ದಿನಗಳ ಅವಧಿಯಲ್ಲಿ ಧಾರ್ಮಿಕ ವಿಧಿವಿಧಾನಗಳ ಜೊತೆಗೆ ನಿತ್ಯವೂ ವೈವಿಧ್ಯಮಯ ಸಂಗೀತ, ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಆಯೋಜಿಸಲಾಗಿದ್ದು, ರಾಜ್ಯದ ಮೂಲೆಮೂಲೆಗಳಿಂದ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಆಗಮಿಸುವ ನಿರೀಕ್ಷೆಯಿದೆ.
ಮಂಜುನಾಥ ಸ್ವಾಮಿಯ ಉತ್ಸವಗಳ ವೇಳಾಪಟ್ಟಿ ಲಕ್ಷ ದೀಪೋತ್ಸವದ ಅಂಗವಾಗಿ ಡಿಸೆಂಬರ್ 4ರಂದು ಬೆಳಗ್ಗೆ 9:30ಕ್ಕೆ ರಾಜ್ಯಮಟ್ಟದ ಬೃಹತ್ ವಸ್ತುಪ್ರದರ್ಶನಕ್ಕೆ ಚಾಲನೆ ದೊರೆಯಲಿದೆ. ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ಅವರು ಈ ವಸ್ತುಪ್ರದರ್ಶನವನ್ನ ಉದ್ಘಾಟಿಸಲಿದ್ದಾರೆ. ಐದು ದಿನಗಳ ಕಾಲ ನಡೆಯುವ ಸ್ವಾಮಿಯ ಉತ್ಸವಗಳ ವಿವರ ಹೀಗಿದೆ ನೋಡಿ:




ಡಿಸೆಂಬರ್ 4: ಸಂಜೆ ಮಂಜುನಾಥ ಸ್ವಾಮಿಯ ಹೊಸಕಟ್ಟೆ ಉತ್ಸವ ಜರುಗಲಿದೆ.

* ಡಿಸೆಂಬರ್ 5: ಸಂಜೆ ದೇವರ ಕೆರೆಕಟ್ಟೆ ಉತ್ಸವ ನೆರವೇರಲಿದೆ.
* ಡಿಸೆಂಬರ್ 6: ಸಂಜೆ ದೇವರ ಲಲಿತೋದ್ಯಾನ ಉತ್ಸವ ನಡೆಯಲಿದ್ದು, ಅಮೃತವರ್ಷಿಣಿ ಸಭಾಭವನದಲ್ಲಿ ವಿಶೇಷ ಲಲಿತಕಲಾಗೋಷ್ಠಿಯನ್ನ ಆಯೋಜಿಸಲಾಗಿದೆ.
* ಡಿಸೆಂಬರ್ 7: ರಾತ್ರಿ ದೇವರ ಕಂಚಿಮಾರುಕಟ್ಟೆ ಉತ್ಸವ ಸಂಪನ್ನಗೊಳ್ಳಲಿದೆ.
ಇದರ ಬೆನ್ನಲ್ಲೇ ಸಂಜೆ 7:30ರಿಂದ ಕಲಾಭಿಮಾನಿಗಳಿಗೆ ವಿಶೇಷ ರಸದೌತಣ ಕಾದಿದೆ. ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ ಅವರ ಪರಿಕಲ್ಪನೆ ಮತ್ತು ಮಾರ್ಗದರ್ಶನದಲ್ಲಿ ಎಸ್ಡಿಎಂ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ‘ಗುಳ್ಳಕಾಯಜ್ಜಿ’ ಎಂಬ ವಿಶೇಷ ದೃಶ್ಯ ಕಾವ್ಯ ಪ್ರದರ್ಶನಗೊಳ್ಳಲಿದೆ. ಒಟ್ಟಿನಲ್ಲಿ, ಒಂದು ಲಕ್ಷ ದೀಪಗಳ ಬೆಳಕಿನಲ್ಲಿ ಕಂಗೊಳಿಸುವ ಶ್ರೀ ಕ್ಷೇತ್ರ ಧರ್ಮಸ್ಥಳವು ಐದು ದಿನಗಳ ಕಾಲ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಲೋಕವನ್ನ ಅನಾವರಣಗೊಳಿಸಲು ಸಜ್ಜಾಗಿದೆ.
