ವೇಣೂರು: ಇಲ್ಲಿಯ ಪ್ರಮುಖ ವಾಣಿಜ್ಯ ಸಂಕೀರ್ಣವಾದ ‘ಗಾರ್ಡನ್ ವ್ಯೂ ಕಾಂಪ್ಲೆಕ್ಸ್’ನ ಮಾಲಕರಾದ ಮಾರ್ಕ್ ಎಗ್ಬರ್ಟ್ ಪಿರೇರಾ (66) ಅವರು ಅಲ್ಪಕಾಲದ ಅಸೌಖ್ಯದಿಂದ ನ. 13ರಂದು ರಾತ್ರಿ ಮಂಗಳೂರಿನ ತಮ್ಮ ನಿವಾಸದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮಾರ್ಕ್ ಎಗ್ಬರ್ಟ್ ಪಿರೇರಾ ಅವರು ವೇಣೂರಿನಲ್ಲಿ ‘ಗಾರ್ಡನ್ ವ್ಯೂ ಕಾಂಪ್ಲೆಕ್ಸ್’ ನಿರ್ಮಿಸಿ, ಜೊತೆಗೆ ಮಂಗಳೂರಿನ ಮನೆಗೂ ಆಗಾಗ ಭೇಟಿ ನೀಡುತ್ತಿದ್ದರು.
ಅತ್ಯಂತ ಶಿಸ್ತುಬದ್ಧ ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದ ಇವರು, ತಾವು ನಿರ್ಮಿಸಿದ ವಾಣಿಜ್ಯ ಸಂಕೀರ್ಣವನ್ನು ಸದಾ ಸ್ವಚ್ಛ ಹಾಗೂ ಸುಂದರವಾಗಿ ನಿರ್ವಹಿಸಿಕೊಂಡು ಬಂದಿದ್ದರು. ತೀರಾ ಸೌಮ್ಯ ಸ್ವಭಾವದವರಾಗಿದ್ದ ಇವರ ಅಗಲುವಿಕೆಗೆ ಕುಟುಂಬಸ್ಥರು, ಬಂಧು-ಬಳಗದವರು ಹಾಗೂ ವೇಣೂರಿನ ಆತ್ಮೀಯ ವಲಯವು ತೀವ್ರ ಸಂತಾಪ ವ್ಯಕ್ತಪಡಿಸಿದೆ. ಕಾಂಪ್ಲೆಕ್ಸ್ನ ಅಂಗಡಿ ಮಾಲಿಕರು ತಮ್ಮ ಮಳಿಗೆಗಳನ್ನು ಮುಚ್ಚಿ ಸಂತಾಪ ವ್ಯಕ್ತಪಡಿಸಿದ್ದಾರೆ.





