ಬೆಳ್ತಂಗಡಿ: ಸಾಮಾಜಿಕ ಸೇವೆ, ಶೈಕ್ಷಣಿಕ ಅಭಿವೃದ್ಧಿ ಹಾಗೂ ಸಮಾಜದ ಬಡ ಮತ್ತು ಹಿಂದುಳಿದ ವರ್ಗಗಳ ಉನ್ನತಿಗಾಗಿ ದಶಕಗಳಿಂದ ನಿರಂತರವಾಗಿ ಶ್ರಮಿಸುತ್ತಿರುವ ಮಾಲಾಡಿಯ ಹಿರಿಯ ಸಮಾಜ ಸೇವಕ ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಅವರು ಪ್ರತಿಷ್ಠಿತ ‘ಭಾರತ ಪಂಚರತ್ನ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.



ಸುವರ್ಣ ಕರ್ನಾಟಕ ಕಾರ್ಮಿಕ ವೇದಿಕೆಯ ವತಿಯಿಂದ ನವೆಂಬರ್ 22ರಂದು ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇವರಿಗೆ ಈ ಗೌರವವನ್ನು ಪ್ರದಾನ ಮಾಡಲಾಗುತ್ತದೆ. ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿರುವ ಮಹತ್ವದ ಕೊಡುಗೆ, ಸಾಮಾಜಿಕ ಕಳಕಳಿ ಹಾಗೂ ಹಿಂದುಳಿದ ಜನರ ಶೈಕ್ಷಣಿಕ ಮತ್ತು ಸಾಮಾಜಿಕ ಏಳಿಗೆಗಾಗಿ ವಿವಿಧ ಸಂಘ-ಸಂಸ್ಥೆಗಳನ್ನು ಸ್ಥಾಪಿಸಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.


ಸಂಘಟನಾತ್ಮಕ ಹಾಗೂ ಶೈಕ್ಷಣಿಕ ಸೇವೆ
ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಅವರು ಜಮೀಯತುಲ್ ಫಲಾಹ್ ಬೆಳ್ತಂಗಡಿಯ ಸಂಸ್ಥಾಪಕ ಅಧ್ಯಕ್ಷರಾಗಿ, ಪ್ರಸ್ತುತ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುಂಜಾಲಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜು, ಮಾಲಾಡಿ ಮತ್ತು ಸೋನಂದೂರು ಸರಕಾರಿ ಶಾಲೆಗಳ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾಗಿ ಹಾಗೂ ಮಾಲಾಡಿ ಸರಕಾರಿ ಐಟಿಐ ಕಾಲೇಜಿನ ಅಭಿವೃದ್ಧಿಯಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ.
ಧಾರ್ಮಿಕ ಹಾಗೂ ಸಾರ್ವಜನಿಕ ಕ್ಷೇತ್ರ: ಮಾಲಾಡಿ ಕೊಲ್ಪೆದಬೈಲ್ ಜುಮಾ ಮಸೀದಿಯ ಅಧ್ಯಕ್ಷರಾಗಿ, ಮಡಂತ್ಯಾರು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಮತ್ತು ಲಯನ್ಸ್ ಕ್ಲಬ್ನ ವಲಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ರಾಜಕೀಯ ಹಿನ್ನೆಲೆ: ರಾಜಕೀಯ ರಂಗದಲ್ಲೂ ಸಕ್ರಿಯರಾಗಿದ್ದ ಅವರು ಜನತಾದಳ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ಕಾರ್ಯನಿರ್ವಹಿಸಿದ್ದು, ಜನತಾದಳದ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿಯೂ, ದಿವಂಗತ ಮಾಜಿ ಶಾಸಕ ವಸಂತ ಬಂಗೇರ ಅವರ ಆಪ್ತ ಸಹಚರರಾಗಿಯೂ ಗುರುತಿಸಿಕೊಂಡಿದ್ದರು.
ಶಿಕ್ಷಣದ ಮೂಲಕ ಸಮಾಜದ ಹಿಂದುಳಿದ ವರ್ಗಗಳ ಏಳಿಗೆ ಮತ್ತು ಜನಸೇವೆಯನ್ನೇ ಜೀವನದ ಪ್ರಮುಖ ಧ್ಯೇಯವನ್ನಾಗಿಸಿಕೊಂಡಿರುವ ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಅವರಿಗೆ ಈ ಪ್ರಶಸ್ತಿ ಲಭಿಸಿರುವುದು ಅವರ ಹಿತೈಷಿಗಳಲ್ಲಿ ಹಾಗೂ ಅಭಿಮಾನಿಗಳಲ್ಲಿ ಅಪಾರ ಸಂತಸ ಮೂಡಿಸಿದೆ.
”ನಿಃಸ್ವಾರ್ಥ ಸೇವೆಯ ಹಾದಿಗೆ ಸಂದ ಕಿರೀಟ!”
ಹಣ, ಅಧಿಕಾರಕ್ಕಿಂತ ಸಮಾಜದ ಕಟ್ಟಕಡೆಯ ವ್ಯಕ್ತಿಯ ಮುಖದಲ್ಲಿ ಮಂದಹಾಸ ಮೂಡಿಸುವುದೇ ಅತಿ ದೊಡ್ಡ ಧರ್ಮವೆಂದು ನಂಬಿ, ಜೀವಿತಾವಧಿಯ ಕಾಯಕವನ್ನೇ ಜನಸೇವೆಗೆ ಮೀಸಲಿಟ್ಟ ಹಿರಿಯ ಚೇತನ ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಅವರ ದಶಕಗಳ ನಿಸ್ವಾರ್ಥ ಸೇವೆಗೆ ಇದೀಗ ರಾಜ್ಯ ಮಟ್ಟದ ಪ್ರತಿಷ್ಠಿತ ‘ಭಾರತ ಪಂಚರತ್ನ ಪ್ರಶಸ್ತಿ’ಯ ಗರಿ ಸಿಕ್ಕಿದೆ. ಶಾಲಾ ಕಾಲೇಜುಗಳ ಅಭಿವೃದ್ಧಿಯಿಂದ ಹಿಡಿದು ಶೈಕ್ಷಣಿಕ ಹಾಗೂ ಸಾಮಾಜಿಕ ಸಂಘಟನೆಗಳ ಮೂಲಕ ಅವರು ಬಿತ್ತಿದ ಸತ್ಕಾರ್ಯಗಳ ಬೀಜಗಳು ಇಂದು ಹೆಮ್ಮರವಾಗಿ ಬೆಳೆದು ನಿಂತಿರುವುದಕ್ಕೆ ಈ ಪ್ರಶಸ್ತಿಯೇ ಸಾಕ್ಷಿಯಾಗಿದೆ. ನಿಸ್ವಾರ್ಥ ಸಾಧನೆಗೆಂದೂ ಮೌನವಾಗುವುದಿಲ್ಲ, ಅದು ಎಂದಾದರೂ ಸರಿ ಇಡೀ ಸಮಾಜದ ಮುಂದೆ ಗೌರವದ ಶಿಖರಕ್ಕೇರುತ್ತದೆ ಎಂಬುದಕ್ಕೆ ಅಬ್ದುಲ್ ಲತೀಫ್ ಸಾಹೇಬ್ ಅವರ ಈ ಸಾಧನೆಯೇ ಜೀವಂತ ನಿದರ್ಶನವಾಗಿದೆ.
