ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಶೇಷ ವಿಡಿಯೋವೊಂದು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಈ ವಿಡಿಯೋದಲ್ಲಿ ಭಾರತದ ಮಾಜಿ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಕೂಡ ಕಾಣಿಸಿಕೊಂಡಿದ್ದು, ಪುಟ್ಟ ಬಾಲಕಿಯೊಬ್ಬಳು ಕನ್ನಡದಲ್ಲಿ ಸುಮಧುರವಾಗಿ ಗಣೇಶನ ಭಕ್ತಿಗೀತೆಯನ್ನು ಹಾಡಿದ್ದಾಳೆ. ಈ ಹಾಡಿಗೆ ಮೋದಿ ಅವರು ತಲೆದೂಗುತ್ತಿರುವುದನ್ನು ಕಾಣಬಹುದಾಗಿದೆ. ಆ ಬಾಲಕಿ ಭಕ್ತಿಗೀತೆಯನ್ನು ಹಾಡುತ್ತಿದ್ದರೆ, ಇತ್ತ ಮೋದಿ ತಮ್ಮ ಕೈಗಳಿಂದ ತಾಳ ಹಾಕುವ ಮೂಲಕ ಬಾಲಕಿಗೆ ಹುರಿದುಂಬಿಸಿದ್ದಾರೆ. ಆದರೆ ಪ್ರಧಾನಿಯ ಮುಂದೆ ಈ ಭಕ್ತಿಗೀತೆಯನ್ನು ಹಾಡಿದ ಈ ಪೋರಿ ಯಾರು ಎಂಬುದು ಇದುವರೆಗೆ ಖಚಿತವಾಗಿಲ್ಲ. ಆದರೆ ಆಕೆಯ ಮುಗ್ತ ಭಕ್ತಿಗೆ ದೇಶದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.





