ರಾಜ್ಯಾದ್ಯಂತ ದೀಪಾವಳಿ ಹಬ್ಬದ ಸಡಗರ-ಸಂಭ್ರಮ ಮನೆಮಾಡಿರುವ ಬೆನ್ನಲ್ಲೇ ವರುಣನ ಅಬ್ಬರ ಜೋರಾಗುವ ಲಕ್ಷಣಗಳು ಕಂಡುಬರುತ್ತಿವೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಾಗೂ ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳಿಯ ಪ್ರಭಾವದಿಂದ ರಾಜ್ಯದ ಹವಾಮಾನದಲ್ಲಿ ಭಾರಿ ಬದಲಾವಣೆ ಉಂಟಾಗಿದ್ದು, ಇಂದು (ನವೆಂಬರ್ 2) ಹಲವೆಡೆ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇದರ ಭಾಗವಾಗಿ ಈಗಾಗಲೇ ವೇಲೂರು ಹಾಗೂ ಸುತ್ತಮುತ್ತಲ ಪರಿಸರದಲ್ಲಿ ಮಳೆ ಆರಂಭಗೊಂಡಿದ್ದು, ಸಾರ್ವಜನಿಕರಲ್ಲಿ ಆತಂಕದ ಜೊತೆಗೆ ಮುನ್ನೆಚ್ಚರಿಕೆಯ ಅಗತ್ಯತೆ ಹೆಚ್ಚಿದೆ.


ವಿಶೇಷವಾಗಿ ಮಂಗಳೂರು, ಉಡುಪಿ ಹಾಗೂ ಕಾರವಾರ ಸೇರಿದಂತೆ ಕರಾವಳಿ ಕರ್ನಾಟಕದಾದ್ಯಂತ ಶನಿವಾರದಿಂದಲೇ ಆರಂಭವಾಗಿರುವ ಮಳೆಯ ವಾತಾವರಣವು ಮುಂದಿನ ಕೆಲವು ದಿನಗಳ ಕಾಲ ಮುಂದುವರಿಯಲಿದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿಯೂ ಮೋಡಕವಿದ ವಾತಾವರಣ ಹಾಗೂ ಶೀತಗಾಳಿ ಆವರಿಸಿದ್ದು, ಮುಂದಿನ ನಾಲ್ಕೈದು ದಿನಗಳ ಕಾಲ ರಾಜ್ಯದಾದ್ಯಂತ ಹವಾಮಾನದಲ್ಲಿ ಏರಿಳಿತಗಳು ಮುಂದುವರಿಯಲಿವೆ.
ಮಳೆಯ ವಾತಾವರಣ ಮತ್ತು ತಂಪು ಗಾಳಿಯ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಸೂಕ್ತ ಕಾಳಜಿ ವಹಿಸುವಂತೆ ಇಲಾಖೆ ಸೂಚಿಸಿದೆ. ಇನ್ನು ಹಬ್ಬದ ಪ್ರಯುಕ್ತ ಪ್ರಯಾಣ ಬೆಳೆಸುವ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಸಾರ್ವಜನಿಕರು ಹವಾಮಾನ ಮುನ್ಸೂಚನೆಯನ್ನು ಗಮನಿಸಿಕೊಂಡು ಸಂಚರಿಸುವುದು ಒಳಿತು. ಹಾಗೆಯೇ ಕೊಯ್ಲಿಗೆ ಬಂದಿರುವ ಬೆಳೆಗಳ ರಕ್ಷಣೆಗೆ ಕೃಷಿಕರು ತಕ್ಷಣವೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೃಷಿ ಇಲಾಖೆ ಹಾಗೂ ಹವಾಮಾನ ತಜ್ಞರು ತುರ್ತು ಎಚ್ಚರಿಕೆ ನೀಡಿದ್ದಾರೆ.

