ಬೆಂಗಳೂರು: ಅಖಿಲ ಕರ್ನಾಟಕ ಕುಂಭ ವೈದ್ಯರ ಒಕ್ಕೂಟದ ದಶಮಾನೋತ್ಸವ, ಸಾಧಕರಿಗೆ ಸನ್ಮಾನ ಹಾಗೂ ಕರ್ನಾಟಕ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮವು ರಾಜಧಾನಿ ಬೆಂಗಳೂರಿನಲ್ಲಿ ಅತ್ಯಂತ ವೈಭವ ಮತ್ತು ಅದ್ದೂರಿಯಾಗಿ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಒಕ್ಕೂಟದ ಸ್ಥಾಪಕ ಅಧ್ಯಕ್ಷರಾದ ಡಾ. ಅಣ್ಣಯ್ಯ ಕುಲಾಲ್ ಅವರು ಆಗಮಿಸಿದ ಸರ್ವ ಗಣ್ಯರನ್ನು ಹಾಗೂ ವೈದ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಪರಿಚಯಿಸಿ, ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಕುಂಭ ವೈದ್ಯರ ಒಕ್ಕೂಟವು ಸಮಾನ ಮನಸ್ಕ ಸಂಘಟನೆಗಳೊಂದಿಗೆ ಕೈಜೋಡಿಸಿ ಕುಂಬಾರ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಉನ್ನತಿಗಾಗಿ ಶ್ರಮಿಸಲಿದ್ದು, ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಅಗತ್ಯ ಪ್ರಯತ್ನಗಳನ್ನು ಮಾಡಲಾಗುವುದು” ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಾ. ಮಹೇಶ್ ಅವರು ಸಂಘದ ಪರಿಷ್ಕೃತ ಬೈಲಾ ಮಂಡಿಸಿ, ಸಭೆಯಿಂದ ಸರ್ವಾನುಮತದ ಅನುಮೋದನೆ ಪಡೆದುಕೊಂಡರು.



ರಾಜಕೀಯ ಹಾಗೂ ಸಾಮಾಜಿಕ ಪ್ರಾತಿನಿಧ್ಯಕ್ಕೆ ಆಗ್ರಹ:
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಅಖಿಲ ಭಾರತ ಕುಂಬಾರ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಶಿವಕುಮಾರ್ ಚೌಡ ಶೆಟ್ಟಿ ಅವರು ಒಕ್ಕೂಟದ ಬೆಳವಣಿಗೆಯನ್ನು ಶ್ಲಾಘಿಸಿ ಶುಭ ಹಾರೈಸಿದರು.
ನಂತರ ಮಾತನಾಡಿದ ಕುಂಭ ವೈದ್ಯ ಕೂಟದ ಸಂಘಟನಾ ಕಾರ್ಯದರ್ಶಿ ಹಾಗೂ ಅಖಿಲ ಭಾರತ ಕುಂಭಾರ ಮಹಾಸಭಾದ ರಾಷ್ಟ್ರೀಯ ಯುವ ಅಧ್ಯಕ್ಷರಾದ ಡಾ. ನಾಗರಾಜ್, “ಕರ್ನಾಟಕದಲ್ಲಿ ಕುಂಬಾರ ಸಮುದಾಯವು ಬೃಹತ್ ಸಂಖ್ಯೆಯಲ್ಲಿದೆ. ರಾಜ್ಯಸಭೆ, ವಿಧಾನ ಪರಿಷತ್ ಹಾಗೂ ವಿಧಾನಸಭೆಗೆ ಆಯ್ಕೆಯಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಬಲ್ಲ ನಾಯಕರು ನಮ್ಮಲ್ಲಿದ್ದಾರೆ. ಆದರೆ ಪ್ರಮುಖ ರಾಜಕೀಯ ಪಕ್ಷಗಳು ಸಮುದಾಯಕ್ಕೆ ಸಾಮಾಜಿಕ ಹಾಗೂ ರಾಜಕೀಯ ನ್ಯಾಯ ನೀಡಲು ಹಿಂದೇಟು ಹಾಕುತ್ತಿರುವುದು ವಿಷಾದಕರ. ಈ ಬಾರಿ ಬರಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಟಿಕೆಟ್ಗಳಿಗೆ ಸೀಮಿತಗೊಳಿಸದೆ, ರಾಜ್ಯಸಭೆ, ವಿಧಾನ ಪರಿಷತ್, ಶಾಸಕ ಹಾಗೂ ಸಂಸದ ಸ್ಥಾನಗಳಿಗೂ ಕುಂಬಾರ ಸಮುದಾಯದ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು. ಈ ಹಕ್ಕಿಗಾಗಿ ರಾಷ್ಟ್ರಮಟ್ಟದ ಹೋರಾಟ ರೂಪಿಸಲು ಸಿದ್ಧತೆ ನಡೆಸಲಾಗಿದೆ ಎಂದು ಪ್ರಬಲವಾಗಿ ಆಗ್ರಹಿಸಿದರು.

ಹಕ್ಕೊತ್ತಾಯ ಮಂಡನೆ
ಕುಂಭ ವೈದ್ಯರ ಒಕ್ಕೂಟದ ಮೂಲಕ ಕರ್ನಾಟಕದ ಕುಂಬಾರರಿಗೆ ರಾಜ್ಯ ಸಭೆ, ವಿಧಾನಪರಿಷತ್, ವಿಧಾನ ಸಭೆ ಗೆ ಅವಕಾಶ ಕೊಡುವಂತೆ ಒತ್ತಾಯಿಸಿದ ಅವರು ಹಿರಿಯ ನಾಯಕ ಮುತ್ಸದಿ ಡಾ ಅಣ್ಣಯ್ಯ ಕುಲಾಲ್ ಉಳ್ತೂರು ಇವರನ್ನ ರಾಜ್ಯ ಸಭೆ ಅಥವಾ ವಿಧಾನ ಪರಿಷತ್ ಗೆ ಆರಿಸಿ ಕುಂಬಾರರಿಗೆ ರಾಜಕೀಯ ಸ್ಥಾನ ಮಾನ ಕೊಡಬೇಕು ಎಂದು ಡಾ. ನಾಗರಾಜ್ ಮಾಲೂರು ಹಕ್ಕೊತ್ತಾಯ ಮಾಡಿದರು.
ವೈದ್ಯರ ಬೃಹತ್ ಸಮಾವೇಶ:
ಈ ಅದ್ಧೂರಿ ಸಮಾರಂಭದಲ್ಲಿ ಒಕ್ಕೂಟದ ಕೋಶಾಧಿಕಾರಿ ಡಾ. ರಾಜಶೇಖರ್, ಹಿರಿಯ ಸಲಹೆಗಾರರಾದ ಡಾ. ಸಗರ್ ಮೈಸೂರು, ಡಾ. ರಾಮಚಂದ್ರ, ಡಾ. ಮಂಜುನಾಥ್ ಶಿವಮೊಗ್ಗ, ಡಾ. ಪ್ರಕಾಶ್ ಮಲೈಷಿಯಾ, ಡಾ. ಗೋವಿಂದ ಶೆಟ್ಟಿ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಹಿರಿಯ-ಕಿರಿಯ ಮೆಡಿಕಲ್, ಡೆಂಟಲ್, ಆಯುರ್ವೇದ ಹಾಗೂ ಆಯುಷ್ ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಸಂಘಟನೆಯ ಉಪಾಧ್ಯಕ್ಷರುಗಳಾದ ಡಾ. ಜಿ. ಬಿ. ಕುಂಭಾರ, ಡಾ. ಪೂರ್ಣಿಮಾ, ಡಾ. ಪದ್ಮಾವತಿ, ಡಾ. ರುಕ್ಮಿಣಿ, ಹಾಗೂ ಡಾ. ಮಂಜುಳಾ ಅವರುಗಳು ಸಮಾರೋಪದ ವಂದನಾರ್ಪಣೆ ಹಾಗೂ ಕಾರ್ಯಕ್ರಮದ ಸಮಗ್ರ ಸಂಯೋಜನೆ ಮತ್ತು ನಿರ್ವಹಣೆಯಲ್ಲಿ ಸಕ್ರಿಯವಾಗಿ ಸಹಕರಿಸಿದರು
