ಬೆಂಗಳೂರು, ಅ.27: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆ ತೀವ್ರಗೊಂಡಿದೆ. ಈ ಸಂಬಂಧ ರಚಿಸಲಾಗಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಪ್ರಮುಖ ಬೆಳವಣಿಗೆಯೊಂದರಲ್ಲಿ, ಈ ಹಿಂದೆ ಪ್ರಕರಣದ ತನಿಖೆ ನಡೆಸಿದ್ದ 15ಕ್ಕೂ ಹೆಚ್ಚು ಅಧಿಕಾರಿ ಮತ್ತು ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿದೆ. 2012ರಲ್ಲಿ ನಡೆದ ಈ ಘಟನೆಯ ತನಿಖೆಯನ್ನು ಆರಂಭದಿಂದ ಅಂದರೆ ಬೆಳ್ತಂಗಡಿ ಪೊಲೀಸ್ ಠಾಣೆಯಿಂದ ಸಿಐಡಿ ಮತ್ತು ಸಿಬಿಐ ಹಂತದವರೆಗೂ ನಡೆಸಿದ ಎಲ್ಲ ಅಧಿಕಾರಿಗಳಿಗೆ ಸಮನ್ಸ್ ನೀಡಲಾಗಿದೆ. ಎಸ್ಐಟಿ ಈ ಅಧಿಕಾರಿಗಳನ್ನು ಸಿಆರ್ಪಿಸಿ ಸೆಕ್ಷನ್ 160ರ ಅಡಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಶುಕ್ರವಾರವೇ ವಿಚಾರಣೆಗೆ ಹಾಜರಾಗಲು ಆದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.



ಪ್ರಕರಣದ ಮರು ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು, ಹಿಂದೆ ಸಂಗ್ರಹಿಸಲಾದ ದಾಖಲೆಗಳು ಮತ್ತು ಮಾಹಿತಿಗಳ ಆಧಾರದ ಮೇಲೆ, ಹಿಂದಿನ ತನಿಖೆಯಲ್ಲಿ ಭಾಗಿಯಾಗಿದ್ದವರ ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಕಲೆಹಾಕಲು ಮುಂದಾಗಿದೆ.

