ಮೈಸೂರು: ವಿಶ್ವ ವಿಖ್ಯಾತ ದಸರಾ ಮಹೋತ್ಸವದಲ್ಲಿ ಇಂದು ಭಾನುವಾರ ಮತ್ತೊಂದು ಸಾಂಸ್ಕೃತಿಕ ವೈಭವವಾದ ಕರಾವಳಿಯ ಕಂಬಳ ಕ್ರೀಡಾಕೂಟಕ್ಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಅದ್ಧೂರಿಯಾಗಿ ಲೋಕಾರ್ಪಣೆ ಆಗಿದೆ. ನಗರಾಭಿವೃದ್ಧಿ ಸಚಿವರಾದ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಮೈಸೂರಲ್ಲಿ ಕಂಬಳಕ್ಕೆ ಚಾಲನೆ ನೀಡಿದರು.


ದಸರಾ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಸಾತಗಳ್ಳಿಯ ವಿ.ಟಿ.ಯು ಕಾಲೇಜು ಬಳಿ ಮೊದಲ ಬಾರಿಗೆ ಆಯೋಜಿಸಿದ್ದ ಕರಾವಳಿಯ ಹೆಮ್ಮೆಯ ಜನಪದ ಕ್ರೀಡೆ”ಕಂಬಳ’ಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಅದ್ಧೂರಿಯಾಗಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮೈಸೂರು ದಸರಾ ಸಾಂಸ್ಕೃತಿಕ ವೈಭವಕ್ಕೆ ಈ ಬಾರಿ ಕಂಬಳ ಕ್ರೀಡಾಕೂಟವು ಮತ್ತಷ್ಟು ಮೆರುಗು ನೀಡಿದೆ. ನಮ್ಮ ರಾಜ್ಯದ ಗ್ರಾಮೀಣ ಸಂಸ್ಕೃತಿಯ ಪ್ರತೀಕವಾಗಿರುವ ಈ ಕಂಬಳ ಕ್ರೀಡೆಯು, ಮೈಸೂರು ದಸರೆಯಷ್ಟೇ ಜಾಗತಿಕ ಮಟ್ಟದಲ್ಲಿ ವಿಶ್ವವಿಖ್ಯಾತಿ ಪಡೆಯಲಿ ಎಂದು ಸಚಿವರು ಆಶಿಸಿದರು.

ಕರಾವಳಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಕ್ರೀಡೆಗೆ ಸೂಕ್ತ ಪ್ರೋತ್ಸಾಹ ನೀಡುವ ಹಾಗೂ ನಮ್ಮ ನಾಡಿನ ವೈವಿಧ್ಯಮಯ ಸಂಸ್ಕೃತಿಯನ್ನು ಯುವ ಪೀಳಿಗೆಗೆ ಪರಿಚಯಿಸುವ ಸದುದ್ದೇಶದಿಂದ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಒತ್ತಾಸೆಯ ಮೇರೆಗೆ ಈ ಐತಿಹಾಸಿಕ ಪಾರಂಪರಿಕ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
150ಕ್ಕೂ ಹೆಚ್ಚು ಜೋಡಿ ಕೋಣ ಭಾಗಿ ಕರಾವಳಿ ಭಾಗದಿಂದ 150ಕ್ಕೂ ಹೆಚ್ಚು ಜೋಡಿ ಉತ್ಸಾಹಿ ಕೋಣಗಳ ತಂಡಗಳು ಆಗಮಿಸಿರುವುದು ಸಂತಸ ತಂದಿದೆ. ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ಕೋಣಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅತ್ಯುತ್ತಮ ಮೇವು, ಆಹಾರ ಹಾಗೂ ಪ್ರತ್ಯೇಕ ಪಶುವೈದ್ಯರ ವಿಶೇಷ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ಈ ವೈಭವದ ಕಂಬಳ ಕಣವನ್ನು ವೀಕ್ಷಿಸಲು ಆಗಮಿಸುತ್ತಿರುವ ಅಪಾರ ಸಂಖ್ಯೆಯ ಸಾರ್ವಜನಿಕರು ಹಾಗೂ ಕ್ರೀಡಾಪ್ರೇಮಿಗಳಿಗೆ ಸಕಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಈ ಐತಿಹಾಸಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜನೆ ಮಾಡಲು ಶ್ರಮಿಸಿದ ಶಾಸಕರಾದ ಅಶೋಕ್ ರೈ ರವರಿಗೆ ವಿಶೇಷವಾದ ಕೃತಜ್ಞತೆ ತಿಳಿಸಿದ ಸಚಿವರು ಜಿಲ್ಲಾಡಳಿತ, ಕಂಬಳ ಸಮಿತಿಯ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಟಿ. ದೇವೇಗೌಡ, ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯರಾದ ಕೆ. ಶಿವಕುಮಾರ್, ಮೈಸೂರು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ರಂಗಸ್ವಾಮಿ, ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್ (ರಾಜ್ಯ ಕಂಬಳ ಸಮಿತಿ) ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿ, ಮೈಸೂರು ದಸರಾ ಕಂಬಳ ಉಪಸಮಿತಿ ಅಧ್ಯಕ್ಷರಾದ ರವಿರಾಜ್, ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷರಾದ ಚಂದ್ರಹಾಸ ಸಾಧು ಸನಿಲ್, ಜಿಲ್ಲಾಧಿಕಾರಿಗಳಾದ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಎಂ.ಕೆ. ಸವಿತಾ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
