ನವದೆಹಲಿ, ಅ.17: ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳು ಕೂಡ ಮೊಬೈಲ್, ಇಂಟರ್ನೆಟ್ ಬಳಕೆಯಿಂದ ಡಿಜಿಟಲ್ ವಂಚನೆಗೆ ಸಿಲುಕುವ, ಮಾನಸಿಕ ಶೋಷಣೆಗೆ ಒಳಗಾಗುವ ಪ್ರಕರಣಗಳು ಹೆಚ್ಚಾಗಿರುವುದರಿಂದ ವಯೋಮಿತಿಯ ಆಧಾರದ ಮೇಲೆ ಮಕ್ಕಳಿಗೆ ಇಂಟರ್ನೆಟ್ ಬಳಕೆಯನ್ನು ನಿಷೇಧಿಸಬೇಕೆಂದು ಅರ್ಜಿ ಸಲ್ಲಿಕೆಯಾಗಿತ್ತು. ಈ ಬಗ್ಗೆ ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ , “ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಇಂಟರ್ನೆಟ್ ಬಳಕೆ ಮೂಲಭೂತ ಹಕ್ಕು. ಇದಕ್ಕೆ ಮಕ್ಕಳು ಕೂಡ ಹೊರತಾಗಿಲ್ಲ. ಮಕ್ಕಳಿಗೂ ಇಂಟರ್ನೆಟ್ (ಅಂತರ್ಜಾಲ) ಸೌಲಭ್ಯವನ್ನು ಪಡೆಯುವುದು ಮತ್ತು ಬಳಸುವುದು ಸಂವಿಧಾನದ ವಿಧಿ 21 ಹಾಗೂ ವಿಧಿ 19(1)(ಎ) ಅಡಿಯಲ್ಲಿ ಸಿಗುವ ಮೂಲಭೂತ ಹಕ್ಕು” ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಮಕ್ಕಳ ಭದ್ರತೆಯ ನೆಪದಲ್ಲಿ ಅವರಿಗೆ ಇಂಟರ್ನೆಟ್ ಬಳಕೆಯನ್ನು ಸಂಪೂರ್ಣವಾಗಿ ನಿರಾಕರಿಸುವುದು ಅತ್ಯಂತ ಹಾಸ್ಯಾಸ್ಪದವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಪ್ರತಿಪಾದಿಸಿದೆ.


ಮಕ್ಕಳ ಹಕ್ಕುಗಳಿಗಾಗಿ ಶ್ರಮಿಸುವ ‘ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ಅಲೈಯನ್ಸ್’ ಎಂಬ ಎನ್ಜಿಒ ಮತ್ತು ಇತರ ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ. ಬಿ. ಪಾರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠವು ಈ ಮಹತ್ವದ ತೀರ್ಪು ನೀಡಿದೆ.

“ಸಂವಿಧಾನದ ವಿಧಿ 21 ಮತ್ತು ವಿಧಿ 19(1)(ಎ) ಅಡಿಯಲ್ಲಿ ಇಂಟರ್ನೆಟ್ ಪಡೆಯುವುದು ಮತ್ತು ಬಳಸುವುದು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕು ಎಂದು ಹೇಳಲು ನಮಗೆ ಯಾವುದೇ ಹಿಂಜರಿಕೆಯಿಲ್ಲ. ವಯಸ್ಸಿನ ವ್ಯತ್ಯಾಸವಿಲ್ಲದೆ ನಮ್ಮ ಮಕ್ಕಳೂ ಸಹ ಅದೇ ಹಕ್ಕುಗಳನ್ನು ಪಡೆಯುತ್ತಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಮಾಹಿತಿಯನ್ನು ಪಡೆಯುವ ಮತ್ತು ಹಂಚಿಕೊಳ್ಳುವ ಹಕ್ಕನ್ನೂ ಒಳಗೊಂಡಿದೆ. ಇಂಟರ್ನೆಟ್ ಸೃಜನಶೀಲತೆ ಮತ್ತು ಜ್ಞಾನದ ಮಾರುಕಟ್ಟೆಯಾಗಿದೆ. ವಿಶೇಷವಾಗಿ ಗ್ರಾಮೀಣ ಮತ್ತು ದೂರದ ಪ್ರದೇಶಗಳ ಮಕ್ಕಳಿಗೆ ಇಂಟರ್ನೆಟ್ ಒಂದೇ ಕಲಿಕೆಯ ಆಸರೆಯಾಗಿದೆ. ಅಷ್ಟೇ ಅಲ್ಲದೆ, ವಿಶೇಷ ಚೇತನ ಮಕ್ಕಳಿಗೆ ತಮ್ಮಂತಹ ಇತರರೊಂದಿಗೆ ಸಂವಹನ ನಡೆಸಲು ಇದು ಏಕೈಕ ಮಾಧ್ಯಮವಾಗಿದೆ. ಹೀಗಾಗಿ, ಮಕ್ಕಳಿಗೆ ಇಂಟರ್ನೆಟ್ ಬಳಕೆ ನಿಷೇಧಿಸಲು ಸಾಧ್ಯವಿಲ್ಲ” ಎಂದು ನ್ಯಾಯಪೀಠ ಹೇಳಿದೆ.
ಸಂಪೂರ್ಣ ನಿಷೇಧ ಪರಿಹಾರವಲ್ಲ:
ಇಂಟರ್ನೆಟ್ ಸಂಪೂರ್ಣವಾಗಿ ಸುರಕ್ಷಿತವಾಗಿಲ್ಲ ಎಂಬುದನ್ನು ಒಪ್ಪಿಕೊಂಡ ನ್ಯಾಯಪೀಠ, “ಸಾಮಾಜಿಕ ಜಾಲತಾಣಗಳು ಹಾನಿಕಾರಕ ವಿಷಯಗಳನ್ನು ತಡೆಯಲು ವಿಫಲವಾಗಿವೆ ಎಂಬ ಕಾರಣಕ್ಕೆ ಮಕ್ಕಳನ್ನು ಇಂಟರ್ನೆಟ್ನಿಂದ ದೂರವಿಡುವುದು ಸಂತ್ರಸ್ತರನ್ನೇ ಅಪರಾಧಿಗಳನ್ನಾಗಿ ಮಾಡಿದಂತಾಗುತ್ತದೆ. ಒಂದುವೇಳೆ ನಾವು ಕಾನೂನುಬದ್ಧವಾಗಿ ನಿಷೇಧಿಸಿದರೂ ಮಕ್ಕಳು ಇಂಟರ್ನೆಟ್ ಬಳಕೆಯನ್ನು ನಿಲ್ಲಿಸುವುದಿಲ್ಲ. ಅದರ ಬದಲಿಗೆ ನಿಯಂತ್ರಣವಿಲ್ಲದ ಹಾಗೂ ಮತ್ತಷ್ಟು ಅಪಾಯಕಾರಿಯಾದ ವೆಬ್ಸೈಟ್ಗಳತ್ತ ಮುಖ ಮಾಡುತ್ತಾರೆ. ನಿಷೇಧ ಹೇರಿದರೆ, ಆನ್ಲೈನ್ನಲ್ಲಿ ಬೆದರಿಕೆ ಅಥವಾ ಶೋಷಣೆಗೆ ಒಳಗಾಗುವ ಮಕ್ಕಳು ಪೋಷಕರಿಂದ ಬೈಗುಳ ತಿನ್ನಬೇಕಾಗುತ್ತದೆ ಎಂಬ ಭಯದಿಂದ ವಿಷಯವನ್ನು ಮುಚ್ಚಿಡುತ್ತಾರೆ. ವಯಸ್ಸಿನ ಆಧಾರದ ಮೇಲೆ ತೀವ್ರ ನಿರ್ಬಂಧ ಹೇರಲು ಬಳಕೆದಾರರ ಸೂಕ್ಷ್ಮ ಡೇಟಾವನ್ನು ಸಂಗ್ರಹಿಸಬೇಕಾಗುತ್ತದೆ. ಇದು ಅತಿಯಾದ ಕಣ್ಗಾವಲು ಮತ್ತು ಮಾಹಿತಿಯ ದುರ್ಬಳಕೆಗೆ ದಾರಿ ಮಾಡಿಕೊಡುತ್ತದೆ” ಎಂದು ಅಭಿಪ್ರಾಯಪಟ್ಟಿದೆ.
