ವೇಣೂರು: ಪ್ರಕೃತಿಯ ಕೋಪ ಹಾಗೂ ವಿಸ್ಮಯಗಳು ಮಾನವನ ಊಹೆಗೆ ನಿಲುಕದವು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸಾಮಾನ್ಯವಾಗಿ ಸಿಡಿಲು ಬಡಿದರೆ ದೊಡ್ಡ ಮಟ್ಟದ ಅಪಾಯ ಅಥವಾ ಆಸ್ತಿಪಾಸ್ತಿ ನಾಶವಾಗುವುದು ಸಹಜ. ಆದರೆ, ಬೆಳ್ತಂಗಡಿ ತಾಲೂಕಿನ ಅಳದಂಗಡಿ ಸಮೀಪ ಬೆಳ್ಳಂಬೆಳಿಗ್ಗೆ ಸಂಭವಿಸಿದ ಘಟನೆಯೊಂದು ಜನರನ್ನು ಒಂದೆಡೆ ಆತಂಕಕ್ಕೆ ಈಡುಮಾಡಿದ್ದರೆ, ಇನ್ನೊಂದೆಡೆ ಪ್ರಕೃತಿಯ ಈ ವಿಚಿತ್ರ ನಡವಳಿಕೆಗೆ ಬೆರಗಾಗುವಂತೆ ಮಾಡಿದೆ. ಹಳೆಯ ಮನೆಯ ಸಿಮೆಂಟ್ ಕಂಬಕ್ಕೆ ಬಡಿದ ಸಿಡಿಲು, ನೇರವಾಗಿ ಅಡಿಕೆ ಸಸಿಗೆ ಪ್ರವೇಶಿಸಿ ಹಾನಿಉಂಟುಮಾಡಿದ್ದು, ಯಾವುದೇ ಜೀವಹಾನಿಸಂಭವಿಸದಿರುವುದು ನಿಟ್ಟುಸಿರು ಬಿಡುವಂತೆ ಮಾಡಿದೆ.
ಬೆಳ್ತಂಗಡಿ ತಾಲೂಕಿನ ಅಳದಂಗಡಿ ಸಮೀಪದ ನಾವರ ರಾಜಪಾದೆ ಎಂಬಲ್ಲಿ ಇಂದು ಮುಂಜಾನೆ ಸುಮಾರು 3.30ರ ಸುಮಾರಿಗೆ ಭೀಕರ ಸಿಡಿಲು ಬಡಿದು ಹಳೆಯ ಮನೆಯೊಂದಕ್ಕೆ ಹಾಗೂ ಅಡಿಕೆ ಸಸಿಗೆ ಹಾನಿಯಾದ ಘಟನೆ ವರದಿಯಾಗಿದೆ.

ಈ ಬಗ್ಗೆ ಮನೆಯವರಾದ ವಿಜಯಕುಮಾರ್ ಜೈನ್ ಅವರು ಮಾಹಿತಿ ನೀಡಿ, ಇಂದು ಬೆಳ್ಳಂಬೆಳಗ್ಗೆ ಈ ಪ್ರದೇಶದಲ್ಲಿ ದಿಢೀರ್ ವಾತಾವರಣ ಬದಲಾಗಿ ಗುಡುಗು-ಸಿಡಿಲಿನ ಆರ್ಭಟ ಆರಂಭವಾಗಿತ್ತು. ಈ ವೇಳೆ ನಾವರ ರಾಜಪಾದೆಯಲ್ಲಿದ್ದ ಹಳೆಯ ಮನೆಯ ಸಿಮೆಂಟ್ ಕಂಬಕ್ಕೆ ಸಿಡಿಲು ತಾಗಿದೆ. ಸಿಮೆಂಟ್ ಕಂಬಕ್ಕೆ ಪಟಾಕಿ ಸಿಡಿದಂತೆ ಬಡಿದ ಸಿಡಿಲ ರಭಸವು ನೇರವಾಗಿ ಸಮೀಪದಲ್ಲೇ ಇದ್ದ ಅಡಿಕೆ ಸಸಿಗೆ ಪಾಸಾಗಿ (ಹೋಗಿ) ಹಾನಿಉಂಟುಮಾಡಿದೆ ಎಂದಿದ್ದಾರೆ.

ಆಶ್ಚರ್ಯ ಮೂಡಿಸಿದ ಸಿಡಿಲ ಹಾದಿ!
ಸಿಡಿಲು ಮನೆಯ ಸಿಮೆಂಟ್ ಕಂಬದಿಂದ ಅಡಿಕೆ ಸಸಿಗೆ ಚಲಿಸಿದ ಸ್ಪಷ್ಟ ಕುರುಹುಗಳು ಸ್ಥಳದಲ್ಲಿ ಗೋಚರಿಸುತ್ತಿದ್ದು, ಈ ಬಗ್ಗೆ ವೀಡಿಯೋ ವೈರಲ್ ಆಗಿದೆ. ಕಂಬದಿಂದ ಗಿಡದವರೆಗಿನ ಸಿಡಿಲ ಪಥವನ್ನು ಕಂಡ ಸ್ಥಳೀಯರು ಪ್ರಕೃತಿಯ ಈ ವಿಚಿತ್ರ ವಿಸ್ಮಯಕ್ಕೆ ಬೆರಗಾಗಿದ್ದಾರೆ. ಸಾಮಾನ್ಯವಾಗಿ ಸಿಡಿಲು ಬಡಿದರೆ ದೊಡ್ಡ ಅನಾಹುತವೇ ಸಂಭವಿಸುತ್ತದೆ. ಆದರೆ ಕಂಬಕ್ಕೆ ಬಡಿದ ಸಿಡಿಲು ಗಿಡದ ಮೂಲಕ ಭೂಮಿಗೆ ಇಳಿದ ಪರಿಣಾಮ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಬೆಳ್ಳಂಬೆಳಿಗ್ಗೆ ಸಿಡಿದ ಆ ಭೀಕರ ಸಿಡಿಲು ಅದೆಷ್ಟೋ ಕುಟುಂಬಗಳ ನೆಮ್ಮದಿ ಕೆಡಿಸಬಹುದಿತ್ತು! ಆದರೆ ಕಂಬಕ್ಕೆ ಬಿದ್ದು ಅಡಿಕೆ ಗಿಡದ ಹಾದಿ ಹಿಡಿದ ಆ ಬೆಂಕಿಯ ಜ್ವಾಲೆ, ತನ್ನ ಕೋಪವನ್ನು ಗಿಡದ ಮೇಲಷ್ಟೇ ತೀರಿಸಿಕೊಂಡು ಮನುಷ್ಯ ಕುಲಕ್ಕೆ ಅಭಯ ನೀಡಿದಂತಿದೆ. ಹಾನಿಯಾದ ಕಂಬ ಹಾಗೂ ಕರಿದುಹೋದ ಅಡಿಕೆ ಸಸಿ ಪ್ರಕೃತಿಯ ರೌದ್ರಾವತಾರಕ್ಕೆ ಸಾಕ್ಷಿಯಾದರೆ, ಪ್ರಾಣಾಪಾಯವಿಲ್ಲದೆ ಪಾರಾದ ಜೀವಗಳು ಪ್ರಕೃತಿಯ ಈ ಕರುಣೆಗೆ ಕೃತಜ್ಞರಾಗಿವೆ!
