ಮಂಗಳೂರು, ಅ.7: ಕರಾವಳಿ ಪ್ರದೇಶದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹೆಮ್ಮೆಯ ಸಂಕೇತವಾಗಿರುವ ಐತಿಹಾಸಿಕ ಮಂಗಳೂರು ದಸರಾ ಹಾಗೂ ನವರಾತ್ರಿ ಮಹೋತ್ಸವ-2026 ಅನ್ನು ಅಕ್ಟೋಬರ್ 11 ರಿಂದ 22 ರವರೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು.


ಮಾಜಿ ಕೇಂದ್ರ ಹಣಕಾಸು ಸಚಿವರು ಹಾಗೂ ದೇವಾಲಯದ ಜೀರ್ಣೋದ್ಧಾರದ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ನಡೆಯಲಿರುವ ಈ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಪದ್ಮರಾಜ್ ಪೂಜಾರಿ ತಿಳಿಸಿದ್ದಾರೆ.ಈ ವರ್ಷ ಕ್ಷೇತ್ರವನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಸುಂದರವಾಗಿ ವಿನ್ಯಾಸಗೊಳಿಸಲಾದ ಭವ್ಯ ದರ್ಬಾರ್ ಹಾಲ್ನಲ್ಲಿ ಶ್ರೀ ಮಹಾಗಣಪತಿ, ಶ್ರೀ ಆದಿಶಕ್ತಿ, ನವದುರ್ಗೆಯರು ಮತ್ತು ವಿದ್ಯಾದೇವಿ ಶ್ರೀ ಶಾರದಾ ಮಾತೆಯ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಭಜನೆ, ನೃತ್ಯ, ಸಂಗೀತ, ಕ್ರೀಡಾಕೂಟ ಹಾಗೂ ವಿವಿಧ ಜಾನಪದ ಕಲಾಪ್ರಕಾರಗಳು ಉತ್ಸವದ ಮೆರುಗನ್ನು ಹೆಚ್ಚಿಸಲಿವೆ.
ಅಕ್ಟೋಬರ್ 12 ರಂದು ಮುಖ್ಯಮಂತ್ರಿಗಳಿಂದ ಉದ್ಘಾಟನೆ
ಅಕ್ಟೋಬರ್ 11 ರಂದು ವೈದಿಕ ಧಾರ್ಮಿಕ ವಿಧಿವಿಧಾನಗಳು ಆರಂಭಗೊಳ್ಳಲಿದ್ದು, ಮಧ್ಯಾಹ್ನ ಶ್ರೀ ಶಾರದಾ ಮಾತೆ ಹಾಗೂ ನವದುರ್ಗೆಯರ ಪ್ರತಿಷ್ಠಾಪನೆ ನಡೆಯಲಿದೆ. ಅಕ್ಟೋಬರ್ 12 ರಂದು ಸಂಜೆ 6.30 ಕ್ಕೆ ಸಿಎಂ ಡಿ. ಕೆ. ಶಿವಕುಮಾರ್ ಅವರು ಮಂಗಳೂರು ದಸರಾ ಮಹೋತ್ಸವವನ್ನು ವೈಭವಪೂರ್ಣವಾಗಿ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಐತಿಹಾಸಿಕ ಮಂಗಳೂರು ದಸರಾ ಶೋಭಾಯಾತ್ರೆಯು ಅಕ್ಟೋಬರ್ 21 ರಂದು ಸಂಜೆ 4 ಗಂಟೆಗೆ ಆರಂಭವಾಗಲಿದೆ.


