ನವದೆಹಲಿ, ಅ.6: ಆಧಾರ್ ಕಾರ್ಡ್ನಲ್ಲಿ ಹೆಸರು ಪರಿಷ್ಕರಣೆ ಅಥವಾ ತಿದ್ದುಪಡಿ ಮಾಡುವ ನಿಯಮಗಳಲ್ಲಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಬದಲಾವಣೆಗಳನ್ನು ಮಾಡಿದೆ. ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಹೆಸರು ತಿದ್ದುಪಡಿಯನ್ನು ವಿವಿಧ ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ರೀತಿಯ ಬದಲಾವಣೆಗೆ ನಿರ್ದಿಷ್ಟ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಹೊಸ ನಿಯಮಗಳು ಸೆಪ್ಟೆಂಬರ್ 18ರಿಂದಲೇ ಜಾರಿಗೆ ಬಂದಿವೆ. ಹೆಸರು ತಿದ್ದುಪಡಿ ಮಾಡಿಸಿಕೊಳ್ಳಲು ಬಯಸುವವರು ಯಾವ ಬದಲಾವಣೆಗೆ ಯಾವ ದಾಖಲೆಗಳನ್ನು ಸಲ್ಲಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ.


ಸಣ್ಣ ಕಾಗುಣಿತ ತಪ್ಪು ಸರಿಪಡಿಸಲು ಅವಕಾಶ : ಹೆಸರಿನ ಮೊದಲಕ್ಷರವನ್ನು ವಿಸ್ತರಿಸುವುದು, ಇನಿಷಿಯಲ್ ಸೇರ್ಪಡೆ ಅಥವಾ ತೆಗೆದುಹಾಕುವುದು, ಮನೆಹೆಸರು ಸೇರಿಸುವುದು, ಹೆಸರಿನ ಪದಗಳ ಕ್ರಮ ಬದಲಾಯಿಸುವುದು ಹಾಗೂ ಉಚ್ಚಾರಣೆ ಒಂದೇ ರೀತಿಯಿರುವ ಸಣ್ಣ ಕಾಗುಣಿತ ತಪ್ಪುಗಳನ್ನು ಸರಿಪಡಿಸಲು ಅವಕಾಶವಿದೆ. ಇದಕ್ಕಾಗಿ ಪಾಸ್ಪೋರ್ಟ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಚಾಲನಾ ಪರವಾನಗಿ ಸೇರಿದಂತೆ ಮಾನ್ಯ ಗುರುತಿನ ಪುರಾವೆ (PoI) ಸಲ್ಲಿಸಬೇಕಾಗುತ್ತದೆ.
ಮದುವೆ ಬಳಿಕ ಹೆಸರು ಬದಲಾವಣೆ : ಮದುವೆಯ ಬಳಿಕ ಗಂಡನ ಮನೆಹೆಸರು ಸೇರಿಸಿಕೊಳ್ಳಲು ಅಥವಾ ವಿಚ್ಛೇದನದ ಬಳಿಕ ಹೆಸರು ಬದಲಾಯಿಸಿಕೊಳ್ಳಲು ಅವಕಾಶವಿದೆ. ಇದಕ್ಕಾಗಿ ಮಾನ್ಯ ಗುರುತಿನ ಪುರಾವೆಯ ಜೊತೆಗೆ UIDAI ನಿಗದಿಪಡಿಸಿರುವ Annexure-D ನಮೂನೆಯಲ್ಲಿ ಪ್ರಮಾಣಪತ್ರ/ಅಫಿಡವಿಟ್ ಹಾಗೂ ವಿವಾಹ ನೋಂದಣಿ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ.
ಪ್ರಾದೇಶಿಕ ಭಾಷೆಯಲ್ಲಿನ ಹೆಸರು ತಪ್ಪಿದ್ದರೆ? : ಆಧಾರ್ ಕಾರ್ಡ್ನಲ್ಲಿರುವ ಇಂಗ್ಲಿಷ್ ಹೆಸರು ಸರಿಯಾಗಿದ್ದು, ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಯಲ್ಲಿ ಹೆಸರು ತಪ್ಪಾಗಿ ಮುದ್ರಣವಾಗಿದ್ದರೆ ಅದನ್ನು ಕೂಡ ತಿದ್ದುಪಡಿ ಮಾಡಿಕೊಳ್ಳಬಹುದು.
ಇದಕ್ಕಾಗಿ ಅಗತ್ಯ ಗುರುತಿನ ಪುರಾವೆಯೊಂದಿಗೆ UIDAI ನಿಗದಿಪಡಿಸಿರುವ ನಮೂನೆಯ ಅಫಿಡವಿಟ್ ಸಲ್ಲಿಸಬೇಕಾಗುತ್ತದೆ.
ಸಂಪೂರ್ಣ ಹೆಸರು ಬದಲಾಯಿಸಲು ಏನು ಬೇಕು? : ಒಬ್ಬ ವ್ಯಕ್ತಿ ತನ್ನ ಮೂಲ ಹೆಸರನ್ನೇ ಸಂಪೂರ್ಣವಾಗಿ ಹೊಸ ಹೆಸರಿಗೆ ಬದಲಾಯಿಸಿಕೊಳ್ಳಲು ಬಯಸಿದರೆ, ಪ್ರಕ್ರಿಯೆ ಮತ್ತಷ್ಟು ಕಠಿಣವಾಗಿದೆ. ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಧಿಕೃತ ಗೆಜೆಟ್ ಅಧಿಸೂಚನೆ ಕಡ್ಡಾಯವಾಗಿರುತ್ತದೆ. ಇದರ ಜೊತೆಗೆ ಹೊಸ ಹೆಸರನ್ನು ಹೊಂದಿರುವ ಗುರುತಿನ ಪುರಾವೆ ಹಾಗೂ ಪತ್ರಿಕೆಯಲ್ಲಿ ಪ್ರಕಟಿಸಿರುವ ಜಾಹೀರಾತಿನ ಪ್ರತಿಯನ್ನು ಸಲ್ಲಿಸಬೇಕಾಗುತ್ತದೆ.
ಹೆಸರು ತಿದ್ದುಪಡಿಗೆ ರೂ.75 ಶುಲ್ಕ : ಜನಸಂಖ್ಯಾ ವಿವರಗಳ ತಿದ್ದುಪಡಿಗೆ ನಿಯಮಿತವಾಗಿ ರೂ. 75 ಶುಲ್ಕ ಅನ್ವಯಿಸುತ್ತದೆ. ಪ್ರಸ್ತುತ myAadhaar ಪೋರ್ಟಲ್ನಲ್ಲಿ ಆನ್ಲೈನ್ ಮೂಲಕ ವಿಳಾಸ ತಿದ್ದುಪಡಿಗೆ ಮಾತ್ರ ಅವಕಾಶವಿದೆ. ಹೆಸರು ತಿದ್ದುಪಡಿ ಮಾಡಿಸಿಕೊಳ್ಳಲು ಅಗತ್ಯ ದಾಖಲೆಗಳೊಂದಿಗೆ ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಬಯೋಮೆಟ್ರಿಕ್ ದೃಢೀಕರಣ ಪೂರ್ಣಗೊಳಿಸಬೇಕಾಗುತ್ತದೆ.
ಜೀವನದಲ್ಲಿ ಎರಡು ಬಾರಿ ಮಾತ್ರ ಹೆಸರು ಬದಲಾವಣೆ? : ಸಾಮಾನ್ಯ ನಿಯಮದ ಪ್ರಕಾರ ಆಧಾರ್ನಲ್ಲಿ ಹೆಸರನ್ನು ಜೀವನದಲ್ಲಿ ಗರಿಷ್ಠ ಎರಡು ಬಾರಿ ಬದಲಾಯಿಸಲು ಅವಕಾಶವಿದೆ. ಹೊಸ SOP ಮೂಲಕ ಹೆಸರು ತಿದ್ದುಪಡಿ ಅರ್ಜಿಗಳ ನೈಜತೆಯನ್ನು ಪರಿಶೀಲಿಸುವುದು ಮತ್ತು ನಕಲಿ ದಾಖಲೆಗಳ ಬಳಕೆಯನ್ನು ತಡೆಯುವುದಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಹೀಗಾಗಿ ಆಧಾರ್ನಲ್ಲಿ ಹೆಸರು ಬದಲಾಯಿಸಲು ಮುಂದಾಗುವವರು ತಮ್ಮ ಬದಲಾವಣೆಯ ಸ್ವರೂಪಕ್ಕೆ ಅನುಗುಣವಾಗಿ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವುದು ಅಗತ್ಯವಾಗಿದೆ.



