ದೇಶಾದ್ಯಂತ ನಕಲಿ ಔಷಧ ಜಾಲದ ಸಂಪರ್ಕದ ಬಗ್ಗೆ ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಕರ್ನಾಟಕ ಆರೋಗ್ಯ ಇಲಾಖೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ನಕಲಿ ಔಷಧಗಳ ತಯಾರಿಕೆ, ದಾಸ್ತಾನು, ಮಾರಾಟ ಮತ್ತು ಪೂರೈಕೆಯ ಬಗ್ಗೆ ಮಾಹಿತಿ ನೀಡುವ ಸಾರ್ವಜನಿಕರಿಗೆ 10 ಸಾವಿರ ರೂ.ನಿಂದ 50 ಸಾವಿರ ರೂ.ವರೆಗೆ ನಗದು ಬಹುಮಾನ ನೀಡಲು ಇಲಾಖೆ ಮುಂದಾಗಿದೆ.


ಔಷಧ ನಿಯಂತ್ರಣ ಮಂಡಳಿ ಸಹಾಯವಾಣಿಗೆ ಮಾಹಿತಿ ನೀಡಲು ಮನವಿ
ನಕಲಿ ಔಷಧಗಳ ಜಾಲದ ಬಗ್ಗೆ ಸಾರ್ವಜನಿಕರಿಂದಲೇ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆಗೆ ಮತ್ತಷ್ಟು ಬಲ ನೀಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಅನುಮಾನಾಸ್ಪದ ಔಷಧಗಳು, ಮೆಡಿಕಲ್ ಸ್ಟೋರ್ಗಳು ಅಥವಾ ನಕಲಿ ಔಷಧ ದಂಧೆಯ ಬಗ್ಗೆ ಮಾಹಿತಿ ಇದ್ದರೆ ಔಷಧ ನಿಯಂತ್ರಣ ಮಂಡಳಿ ಸಹಾಯವಾಣಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.
ಸಾರ್ವಜನಿಕರಿಂದ ಲಭ್ಯವಾಗುವ ಮಾಹಿತಿಯನ್ನು ಆಧರಿಸಿ ಔಷಧ ನಿಯಂತ್ರಣ ಅಧಿಕಾರಿಗಳು ಪರಿಶೀಲನೆ ಹಾಗೂ ತನಿಖೆ ನಡೆಸಲಿದ್ದಾರೆ. ನಕಲಿ ಔಷಧ ತಯಾರಿಕೆ ಅಥವಾ ಮಾರಾಟದ ಬಗ್ಗೆ ಖಚಿತ ಸುಳಿವು ದೊರೆತರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ.
ನಕಲಿ ಅಥವಾ ಅನುಮಾನಾಸ್ಪದ ಔಷಧ ಕಂಡುಬಂದರೆ ಸುಮ್ಮನಿರದೆ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. ಮಾಹಿತಿ ನೀಡುವವರ ವಿವರಗಳನ್ನು ಗೌಪ್ಯವಾಗಿಡುವ ವ್ಯವಸ್ಥೆಯನ್ನೂ ಕಲ್ಪಿಸಲು ಇಲಾಖೆ ಮುಂದಾಗಿದೆ.



