ವೇಣೂರು: ಸಹಕಾರ ಕ್ಷೇತ್ರದಲ್ಲಿ ಸಾಧನೆಯ ಮೈಲುಗಲ್ಲು ಸ್ಥಾಪಿಸಿರುವ ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಮತ್ತೊಮ್ಮೆ ತನ್ನ ಹೆಮ್ಮೆಯ ಪರಂಪರೆಯನ್ನು ಮುಂದುವರೆಸಿದೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ (SCDCC) ಬ್ಯಾಂಕಿನ ವತಿಯಿಂದ ನೀಡಲ್ಪಡುವ ‘ಉತ್ತಮ ಸಂಘ’ ಪ್ರಶಸ್ತಿಗೆ ಈ ಸಂಘವು ಸತತ ಒಂಬತ್ತನೇ ಬಾರಿಗೆ ಆಯ್ಕೆಯಾಗುವ ಮೂಲಕ ಅಸಾಮಾನ್ಯ ಸಾಧನೆ ಮಾಡಿದೆ.


”ಸಹಕಾರವೇ ಜೀವನ, ಪರಸ್ಪರ ಸಹಕಾರವೇ ಪ್ರಗತಿಯ ಮೂಲ” ಎಂಬ ತತ್ವಕ್ಕೆ ಅಕ್ಷರಶಃ ಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಸಹಕಾರ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಅವಿರತ ಸೇವೆ, ಪಾರದರ್ಶಕ ಆಡಳಿತ ಮತ್ತು ಗ್ರಾಹಕಸ್ನೇಹಿ ಸೇವೆಗಳ ಮೂಲಕ ಜಿಲ್ಲೆಯ ಇತರ ಸಂಘಗಳಿಗೆ ಮಾದರಿಯಾಗಿರುವ ಈ ಸಂಘವು, ಇದೀಗ ಸತತ ಒಂಬತ್ತನೇ ಬಾರಿಗೆ ‘ಉತ್ತಮ ಸಂಘ’ ಪ್ರಶಸ್ತಿಗೆ ಭಾಜನವಾಗುವ ಮೂಲಕ ತನ್ನ ಯಶಸ್ಸಿನ ಓಟವನ್ನು ಮುಂದುವರೆಸಿದೆ.
ಆರ್ಥಿಕ ಶಿಸ್ತಿಗೆ ಸಂದ ಗೌರವ; ಸುಂದರ ಹೆಗ್ಡೆ BE
ಈ ಬಗ್ಗೆ ಸಂಘದ ಅಧ್ಯಕ್ಷರಾದ ಸುಂದರ ಹೆಗ್ಡೆ BE ಅವರು ‘ನ್ಯೂಸ್ 19 ಕನ್ನಡ’ದ ಜೊತೆ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ (SCDCC) ಬ್ಯಾಂಕ್ ಘೋಷಿಸಿರುವ ಈ ಗರಿಮೆಯು ಸಂಘದ ಸಾಮೂಹಿಕ ಪರಿಶ್ರಮ ಹಾಗೂ ವಿಶ್ವಾಸಾರ್ಹತೆಗೆ ಸಂದ ಅತ್ಯುನ್ನತ ಮನ್ನಣೆಯಾಗಿದೆ. ಗ್ರಾಮೀಣ ಮಟ್ಟದಲ್ಲಿ ರೈತರು ಮತ್ತು ಸಾರ್ವಜನಿಕರಿಗೆ ನೀಡುತ್ತಿರುವ ಅತ್ಯುತ್ತಮ ಸೇವೆ ಹಾಗೂ ಆರ್ಥಿಕ ಶಿಸ್ತಿಗೆ ಸಂದ ಗೌರವ ಇದಾಗಿದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಆ. 22ರಂದು ಮಂಗಳೂರಿನ ಉತ್ಕೃಷ್ಠ ಸಹಕಾರಿ ಸೌಧದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ.



