ಸಂಕ್ರಾಂತಿ ಪೂಜೆ, ಮಹಾಸಭೆ, ಸಾಧಕ ವಿದ್ಯಾರ್ಥಿನಿಗೆ ಸನ್ಮಾನ ಕಾರ್ಯಕ್ರಮ


ಕಾವೂರು: ಪ್ರಸಿದ್ಧ ಕಾವೂರು ಕರ್ಮರನ್ ಗೋತ್ರದ ಮೂಲಸ್ಥಾನದಲ್ಲಿ ಪ್ರಕೃತಿ ಆರಾಧನೆ ಹಾಗೂ ಸಂಪ್ರದಾಯದ ಪ್ರತೀಕವಾದ ನಾಗರ ಪಂಚಮಿ ಹಬ್ಬವನ್ನು ಇಂದು (ಆ. 17) ಅತ್ಯಂತ ಶ್ರದ್ಧಾ ಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು.
ಮೂಲಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಹಾಗೂ ಟ್ರಸ್ಟ್ ಪದಾಧಿಕಾರಿಗಳು, ಪರಿಚಾರಕರು, ಹಿರಿಯರು ಕುಟುಂಬ ಸದಸ್ಯರು ಹಾಗೂ ಸ್ಥಳೀಯ ಭಕ್ತಾಧಿಗಳ ಉಪಸ್ಥಿತಿಯಲ್ಲಿ ನಾಗದೇವರಿಗೆ ತನು ತರ್ಪಣ ಹಾಗೂ ಪ್ರಾರ್ಥನೆಗಳು ವಿಧಿವತ್ತಾಗಿ ಜರುಗಿದವು.
ವಿವಿಧೆಡೆಯಿಂದ ಆಗಮಿಸಿದ್ದ ಗೋತ್ರದ ಬಾಂಧವರು ಹಾಗೂ ನೂರಾರು ಭಕ್ತರು ಮೂಲಸ್ಥಾನದಲ್ಲಿ ಜಮಾಯಿಸಿ, ನಾಗದೇವರಿಗೆ ತನು ಸಮರ್ಪಿಸಿ ಕೃತಾರ್ಥರಾದರು.
ನಾಗರ ಪಂಚಮಿಯ ಧಾರ್ಮಿಕ ವಿಧಿವಿಧಾನಗಳ ಮುಕ್ತಾಯದ ಬಳಿಕ ಮೂಲಸ್ಥಾನದ ಕುಟೀರದಲ್ಲಿ ಜಮಾಯಿಸಿದ್ದ ನೂರಾರು ಭಕ್ತರಿಗೆ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಇದಕ್ಕೂ ಮೊದಲು ಸಿಂಹ ಸಂಕ್ರಮಣ ಪ್ರಯುಕ್ತ ಮೂಲಸ್ಥಾನದ ಪರಿವಾರ ದೈವಗಳಿಗೆ ಸಂಕ್ರಾಂತಿ ಸೇವೆ ನಡೆಯಿತು.
ಸನ್ಮಾನ
ಕಳೆದ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 596 ಅಂಕ ಪಡೆದು ರಾಜ್ಯದಲ್ಲೇ ನಾಲ್ಕನೇ ಸ್ಥಾನ ಪಡೆದುಕೊಂಡಿರುವ ಬಂಟ್ವಾಳ ತಾಲೂಕಿನ ನಿವಾಸಿ, ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕು. ಜ್ಞಾನಶ್ರೀ ಡಿ. ಅರಳ ಅವರನ್ನು ಕುಟುಂಬದ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕು. ಜ್ಞಾನಶ್ರೀ ಕುಟುಂಬ ಸದಸ್ಯ ಡಿ. ಡೊಂಬಯ್ಯ ಅರಳ ಮತ್ತು ಶ್ರೀಮತಿ ಉಷಾ ದಂಪತಿಯ ಪುತ್ರಿ.
ಮಹಾಸಭೆ
ಕುಲಾಲರ ಕರ್ಮರನ್ ಗೋತ್ರದ ನಾಗಮೂಲ ದೈವಸ್ಥಾನ ಅಡಳಿತ ಟ್ರಸ್ಟ್ (ರಿ.) ಇದರ ವಾರ್ಷಿಕ ಮಹಾಸಭೆಯು ಟ್ರಸ್ಟ್ ಅಧ್ಯಕ್ಷರಾದ ಶ್ರೀಮತಿ ಹರಿಣಾಕ್ಷಿ ಸುನೀಲ್ ಬಂಗೇರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕೋಶಾಧಿಕಾರಿ ಸುಂದರ ಬಂಗೇರ ಕಳೆದ ಸಾಲಿನ ಖರ್ಚು-ವೆಚ್ಚಗಳ ವರದಿ ಮಂಡಿಸಿದರು.
ನೂತನ ಪದಾಧಿಕಾರಿಗಳ ಆಯ್ಕೆ
ಇದೇ ಸಂದರ್ಭದಲ್ಲಿ ಟ್ರಸ್ಟ್ಗೆ ನೂತನ ಪದಾಧಿಕಾರಿ ಹಾಗೂ ಸದಸ್ಯರುಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ಅಧ್ಯಕ್ಷರಾಗಿ ಶ್ರೀಮತಿ ಹರಿಣಾಕ್ಷಿ ಸುನೀಲ್ ಬಂಗೇರ ಹಾಗೂ ಕಾರ್ಯದರ್ಶಿಯಾಗಿ ಲೋಕನಾಥ ಡಿ. ಅವರನ್ನು ಪುನರ್ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ದಿನಕರ ಬಂಜನ್ ಪುನರ್ ಆಯ್ಕೆಯಾದರು. ಜೊತೆ ಕಾರ್ಯದರ್ಶಿಯಾಗಿ ರಜತ್, ಜೊತೆ ಕೋಶಾಧಿಕಾರಿಯಾಗಿ ಉಮಾನಾಥ ಮೂಲ್ಯ ಕೆ. ಅವರನ್ನು ಆಯ್ಕೆ ಮಾಡಲಾಯಿತು. ಟ್ರಸ್ಟ್ನ ಕಾರ್ಯಕಾರಿ ಸಮಿತಿಗೆ ೧೮ ಮಂದಿ ಸದಸ್ಯರನ್ನು ಸೇರಿಸಿಕೊಳ್ಳಲಾಯಿತು. ನಿಕಟಪೂರ್ವ ಜೊತೆ ಕಾರ್ಯದರ್ಶಿ ಪವಿತ್ರಾ, ಕುಟೀರ ಮನೆಯ ನಾರಾಯಣ ಮೂಲ್ಯ ಸೇರಿದಂತೆ ದೈವಗಳ ಪರಿಚಾರಕರು, ಕುಟುಂಬ ಸದಸ್ಯರು ಹಾಗೂ ಅವರ ಮನೆಯವರು ಉಪಸ್ಥಿತರಿದ್ದರು.
ಪ್ರಕೃತಿ ರಕ್ಷಣೆ ಹಾಗೂ ಸಮುದಾಯದ ಒಳಿತಿಗಾಗಿ ಪ್ರಾರ್ಥಿಸಿದ ಈ ವಿಶೇಷ ಆಚರಣೆಯು, ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಜೀವಂತಿಕೆಗೆ ಸಾಕ್ಷಿಯಾಯಿತು. ಸಮಾರಂಭದ ಯಶಸ್ಸಿಗೆ ಗೋತ್ರದ ಹಿರಿಯರು, ಆಡಳಿತ ಟ್ರಸ್ಟ್, ಊರ ಹತ್ತು ಸಮಸ್ತರು ಹಾಗೂ ಕುಟುಂಬ ಸದಸ್ಯರು ಕೈಜೋಡಿಸಿದ್ದರು. ನಾಗದೇವನ ಕೃಪಾಶೀರ್ವಾದದೊಂದಿಗೆ ಈ ಬಾರಿಯ ನಾಗರ ಪಂಚಮಿ ಹಬ್ಬವು ಸಡಗರದಿಂದ ಸಮಾಪ್ತಿಗೊಂಡಿತು.



