ಬೆಳ್ತಂಗಡಿ: ಕೈಯಲ್ಲಿ ತರಕಾರಿ ತೂಕ ಮಾಡುವ ತೂಕದ ಕಲ್ಲು, ಗ್ರಾಹಕರೊಂದಿಗೆ ಲೇವಾದೇವಿ ಮಾತು… ಇದು ಸಾಮಾನ್ಯವಾಗಿ ಯಾವುದೇ ತರಕಾರಿ ಅಂಗಡಿಯಲ್ಲಿ ಕಾಣುವ ದೃಶ್ಯ. ಆದರೆ, ಇಲ್ಲೊಬ್ಬ ತರಕಾರಿ ವ್ಯಾಪಾರಿ ಕೇವಲ ತರಕಾರಿ ಮಾರುವುದಷ್ಟೇ ಅಲ್ಲ, ತನ್ನ ಗಂಟಲಿನ ಜಾದೂನಿಂದಲೇ ಜನರನ್ನು ಮಂತ್ರಮುಗ್ಧರನ್ನಾಗಿಸುತ್ತಿದ್ದಾರೆ!


ಹೌದು, ರಾಜಕೀಯ ನಾಯಕರಿಂದ ಹಿಡಿದು ಸಿನಿಮಾ ತಾರೆಯರ ಧ್ವನಿಯನ್ನು ಅಚ್ಚುಕಟ್ಟಾಗಿ ಅನುಕರಣೆ ಮಾಡುವ ಮೂಲಕ ತರಕಾರಿ ವ್ಯಾಪಾರಿ ಇಲಿಯಾಸ್ ಸದ್ಯ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದು, ಇವರ ಈ ಅದ್ಭುತ ಪ್ರತಿಭೆ ಈಗ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ.
ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ನಿವಾಸಿ ಇಲಿಯಾಸ್ ತರಕಾರಿ ವ್ಯಾಪಾರಸ್ಥರು. ಘಟ್ಟ ಪ್ರದೇಶಗಳಿಂದ ತರಕಾರಿಗಳನ್ನು ವಾಹನದಲ್ಲಿ ತಂದು ಕರಾವಳಿಯಲ್ಲಿ ಮಾರಾಟ ಮಾಡುತ್ತಾರೆ. ಆದರೆ ವಿಚಾರ ಅದಲ್ಲ… ಇವರಲ್ಲಿ ಸ್ವರ ಅನುಕರಣೆಯ ವಿಶೇಷ ಪ್ರತಿಭೆ ಇದೀಗ ಸಖತ್ ವೈರಲ್ ಆಗಿದೆ.
ರಾಜಕೀಯ ನಾಯಕರ ಒನಪು, ಸಿನಿಮಾ ನಟರ ಡೈಲಾಗ್ಗಳು ಥೇಟ್ ಅವರೇ ಬಂದು ನಿಂತಂತೆ ಕೇಳಿಸಿದರೆ ಹೇಗಿರುತ್ತೆ? ಅರೆ, ಇದು ಸ್ಟುಡಿಯೋ ಅಲ್ಲ, ಸಿನಿಮಾ ಶೂಟಿಂಗ್ ಸ್ಪಾಟ್ ಕೂಡ ಅಲ್ಲ; ಇದು ಒಬ್ಬ ಸಾಮಾನ್ಯ ತರಕಾರಿ ವ್ಯಾಪಾರಿಯ ಸಂಚಾರಿ ಅಂಗಡಿ! ಬದುಕಿನ ಬಂಡಿ ಓಡಿಸಲು ತರಕಾರಿ ಬಂಡಿಯಲ್ಲಿ ತರಕಾರಿ ಮಾರುವ ಇಲಿಯಾಸ್, ತಮ್ಮ ಅದ್ಭುತ ಧ್ವನಿ ಅನುಕರಣಾ ಪ್ರತಿಭೆಯಿಂದಲೇ ಇಂದು ಸೆಲೆಬ್ರಿಟಿಗಳಂತೆ ಸದ್ದು ಮಾಡುತ್ತಿದ್ದಾರೆ.
ಸುಮಾರು 15ಕ್ಕೂ ಹೆಚ್ಚು ರಾಜಕೀಯ ನಾಯಕರು, ಸಿನಿಮಾ, ನಟ-ನಟಿಯರ ಸ್ವರ ಅನುಕರಣೆ ಮಾಡುವ ವಿಶೇಷ ಪ್ರತಿಭೆ ಉಳ್ಳವರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಸಿದ್ದರಾಮಯ್ಯ, ಹಿರಿಯ ನಟಿ ಜಯಂತಿ, ರಾಜ್ಕುಮಾರ್, ಅಂಬರೀಶ್, ಟೆನ್ನಿಸ್ ಕೃಷ್ಣ, ಕಿಚ್ಚ ಸುದೀಪ್, ಸೇರಿದಂತೆ ಹಲವು ನಟ-ನಟಿಯವರ ಸ್ವರ ಅನುಕರಣೆ ಮಾಡುತ್ತಾರೆ. ಅವಳಿ ಜಿಲ್ಲೆಗಳ ವಿವಿಧೆಡೆಗಳಲ್ಲಿ 400ಕ್ಕೂ ಕಾರ್ಯಕ್ರಮ ನೀಡಿದ್ದಾರೆ. ಅಲ್ಲದೆ ನಮ್ಮ ಟಿವಿಯಲ್ಲೂ ಕಾರ್ಯಕ್ರಮ ಪ್ರಸ್ತುತ ಪಡಿಸಿರುವ ಇವರು ಮಜಾ ಟಾಕೀಸ್ನಲ್ಲಿ ಪಾಲ್ಗೊಂಡಿದ್ದಾರಂತೆ.
ಕಲಿಕೆಗೆ ಅಥವಾ ಪ್ರತಿಭೆ ಹೊರಹಾಕಲು ದೊಡ್ಡ ವೇದಿಕೆಯೇ ಬೇಕೆಂದಿಲ್ಲ ಎಂಬುದಕ್ಕೆ ಇಲ್ಲೊಬ್ಬರು ಜೀವಂತ ಉದಾಹರಣೆ. ಬದುಕು ಸಾಗಿಸಲು ತರಕಾರಿ ವ್ಯಾಪಾರವನ್ನೇ ನಂಬಿಕೊಂಡಿರುವ ಇಲಿಯಾಸ್, ತಮ್ಮ ಗಂಟಲಲ್ಲಿ ಅಡಗಿರುವ ಅದ್ಭುತ ಧ್ವನಿ ಅನುಕರಣಾ ಕಲೆಯ ಮೂಲಕವೇ ತುಳುವರ ಮತ್ತು ಕನ್ನಡಿಗರ ಮನಗೆದ್ದಿದ್ದಾರೆ. 15ಕ್ಕೂ ಹೆಚ್ಚು ದಿಗ್ಗಜರ ಸ್ವರವನ್ನು ನಿಯಾಸವಾಗಿ ಹೊರಡಿಸುವ ಇವರ ಕಥೆ ನಿಜಕ್ಕೂ ವಿಸ್ಮಯಕಾರಿ.
ಗ್ರಾಹಕರಿಗೆ ತರಕಾರಿ ತೂಕ ಮಾಡಿ ಕೊಡುವಷ್ಟೇ ಖುಷಿಯಿಂದ, ಅವರು ಕೇಳಿದ ನಾಯಕರ ಧ್ವನಿಯಲ್ಲಿ ಮಾತನಾಡಿ ಎಲ್ಲರ ಮುಖದಲ್ಲಿ ನಗು ಮೂಡಿಸುತ್ತಾರೆ. ಕಷ್ಟದ ನಡುವೆಯೂ ತಮ್ಮ ವಿಶಿಷ್ಟ ಕಲೆಯನ್ನು ಜೀವಂತವಾಗಿರಿಸಿಕೊಂಡಿರುವ ಈ ಧ್ವನಿ ಜಾದೂಗಾರನ ಪ್ರತಿಭೆಗೆ ಈಗ ತುಳುವರಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ದೊಡ್ಡ ದೊಡ್ಡ ವೇದಿಕೆಗಳು ಇವರನ್ನು ಹುಡುಕಿ ಬರುವಂತಾಗಲಿ ಎಂಬುದು ‘ನ್ಯೂಸ್ 19 ಕನ್ನಡ’ ಆಶಯ.



