ವೇಣೂರು: ಅಡುಗೆ ಎಂಬುದು ಕೇವಲ ಹೊಟ್ಟೆಪಾಡಿನ ಕೆಲಸವಲ್ಲ, ಅದೊಂದು ಅದ್ಭುತ ಕಲೆ ಮತ್ತು ನಿರಂತರ ಪ್ರಯೋಗಶೀಲತೆಯ ಲೋಕ. ಈ ಕಲೆಗೆ ತನ್ನದೇ ಆದ ಸಮರ್ಪಣೆ ಹಾಗೂ ನಾವೀನ್ಯತೆಯ ಸ್ಪರ್ಶವನ್ನು ನೀಡಿರುವ ವೇಣೂರು ಕರಿಮಣೇಲು ಗ್ರಾಮದ ಮೀಯಂದೂರಿನ ದಿವ್ಯಾ ಮಹೇಶ್ ಅವರು. 1000 ರೆಸಿಪಿ ತಯಾರಿಸುವ ಮೂಲಕ ಪಾಕಕಲೆ ಕ್ಷೇತ್ರದಲ್ಲಿ ಒಂದು ಸ್ಮರಣೀಯ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ.


ಒಂದಲ್ಲ, ಎರಡಲ್ಲ-ಬರೋಬ್ಬರಿ ಒಂದು ಸಾವಿರಕ್ಕೂ ಅಧಿಕ ವಿಭಿನ್ನ ರೆಸಿಪಿಗಳನ್ನು ಯಶಸ್ವಿಯಾಗಿ ಪೂರೈಸುವ ಮೂಲಕ ಅವರು ಪಾಕಕಲೆಗೆ ಹೊಸ ಆಯಾಮವನ್ನು ತಂದುಕೊಟ್ಟಿದ್ದಾರೆ. ಸಾಂಪ್ರದಾಯಿಕ ರುಚಿಗಳಿಗೆ ಆಧುನಿಕತೆಯ ಮೆರುಗು ನೀಡಿ, ಅಡುಗೆಯನ್ನು ಅತ್ಯಂತ ಆಕರ್ಷಕ ಹಾಗೂ ಸುಲಭವಾಗಿಸಿರುವ ಇವರ ಈ ಸಾಧನೆ, ಅಡುಗೆಯನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿದೆ. ಕರಾವಳಿಯ ಸೊಗಡನ್ನು ಸಾಮಾಜಿಕ ಜಾಲತಾಣದ ಮೂಲಕ ಜಗತ್ತಿಗೆ ಪರಿಚಯಿಸುತ್ತಿರುವ ದಿವ್ಯ ಮಹೇಶ್ ಅವರ ಈ ಅನನ್ಯ ಪಯಣದ ಒಂದು ರೋಚಕ ನೋಟ ಇಲ್ಲಿದೆ.

ಇವರ ಕೈಚಳಕದಲ್ಲಿ ಮೂಡಿಬಂದ ವೈವಿಧ್ಯಮಯ ಹಾಗೂ ನಾಲಿಗೆಗೆ ರುಚಿ ನೀಡುವ ಸಾವಿರಾರು ವಿಭಿನ್ನ ಅಡುಗೆಗಳು ಈಗ ಪಾಕಪ್ರಿಯರ ಮನಸ್ಸನ್ನು ಕದ್ದಿದ್ದು, ಸಾಮಾಜಿಕ ಜಾಲತಾಣಗಳು ಹಾಗೂ ಅಡುಗೆ ಪ್ರೇಮಿಗಳ ವಲಯದಲ್ಲಿ ವ್ಯಾಪಕ ಪ್ರಶಂಸೆ ಹಾಗೂ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.
ಮೂಗು ಮುರಿಯುವವರ ಮುಂದೆ ತಮ್ಮ ಪಾಕಕಲೆಯ ಕೌಶಲ್ಯದಿಂದಲೇ ಹೊಸ ಲೋಕ ಸೃಷ್ಟಿಸಬಹುದು ಎಂಬುದನ್ನು ತೋರಿಸಿಕೊಟ್ಟವರು ದಿವ್ಯಾ ಮಹೇಶ್. ನಾಲಿಗೆಗೆ ರುಚಿ ನೀಡುವ ಹತ್ತಾರು ಪದಾರ್ಥಗಳನ್ನು ಸಮ್ಮಿಲನಗೊಳಿಸಿ, ಅಡುಗೆಯನ್ನು ಕಲೆಯಾಗಿ ಬದಲಾಯಿಸಿದ ವೇಣೂರಿನ ಈ ಸಾಧಕಿ, ಇದೀಗ ಬರೋಬ್ಬರಿ ಸಾವಿರ ರೆಸಿಪಿಗಳ ಮೈಲಿಗಲ್ಲನ್ನು ತಲುಪಿದ್ದಾರೆ. ಅವರ ಈ ಅಪರೂಪದ ಪಾಕಯಾನದ ರೋಚಕ ಹಾದಿಯ ಸಂಕ್ಷಿಪ್ತ ವಿವರ ಇಲ್ಲಿದೆ.
1000 ರೆಸಿಪಿ
ಹೆಸರು ದಿವ್ಯಾ ಮಹೇಶ್. ವೇಣೂರು ಕರಿಮಣೇಲು ಗ್ರಾಮದ ಮಿಯಂದೂರಿನ ಪ್ರಗತಿಪರ ಕೃಷಿಕರು, ಉದ್ಯಮಿಗಳಾಗಿರುವ ಮಹೇಶ್ ಯು.ಎಸ್. ಅವರ ಧರ್ಮಪತ್ನಿ. ಗುಡ್ಡಾ ಭಟ್ ಜೋಷಿ ಹಾಗೂ ಶ್ರೀಮತಿ ಉಮಾ ಪ್ರಕಾಶ್ ಜಯಂತ್ ದೇಸಾಯಿ ಅವರು ನಮ್ಮ ಅಡುಗೆ ಅರಮನೆ ಎಂಬ ಫೇಸ್ಬುಕ್ ಪೇಜ್ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ದಿವ್ಯಾ ಮಹೇಶ್ ಅವರು ಬರೋಬ್ಬರಿ 1000 ರೆಸಿಪಿಗಳನ್ನು ಪರಿಚಯಿಸಿದ್ದಾರೆ. ಇವರ ಈ ಸಾಧನೆಗೆ ಪತಿ ಮಹೇಶ್ ಯು.ಎಸ್., ಅತ್ತೆ ಹಾಗೂ ಮಕ್ಕಳು ಕೂಡಾ ಸಹಕಾರ ಮತ್ತು ಬೆಂಬಲ ನೀಡುತ್ತಿದ್ದಾರೆ ಎನ್ನುತ್ತಾರೆ ದಿವ್ಯಾ.
ಲಭಿಸಿದ ಬಹುಮಾನಗಳು
ಗುಡ್ಡ ಭಟ್ ಇವರ ಪೇಜ್ನ 3 ಪೇಜ್ಗಳ ಅಡ್ಮಿನ್ ಆಗಿ ದಿವ್ಯಾ ಮಹೇಶ್ ನಿಯಂತ್ರಣ ಮಾಡುತ್ತಿದ್ದು, ಈ ಪೇಜ್ನಲ್ಲಿ ವಿಶೇಷ ರೀತಿಯ ರೆಸಿಪಿಗಳನ್ನು ಸಾದರಪಡಿಸಿದ್ದಕ್ಕಾಗಿ ಹತ್ತು ಹಲವಾರು ಬಹುಮಾನಗಳು ಲಭಿಸಿವೆ.
ಉತ್ತಮ ಸಾರಥಿ, ಜಾಕ್ ಫ್ರೂಟ್ ಆನ್ಲೈನ್ ಕಾಂಟೆಸ್ಟ್ ವಿನ್ನರ್, ಅಮ್ಮ ಮಕ್ಕಳ ಅಡುಗೆಯಲ್ಲಿ ಬೆಸ್ಟ್ ಕಿಡ್ ಚೋಟಾ ಚೇಫ್, ಜಾಗೆರಿ ಡಾಟ್ ಕಾಂ ಅವರಿಂದ ಅಡುಗೆ ಅನ್ನಪೂರ್ಣೇಶ್ವರಿ, ದೀಪಾವಳಿ ಸ್ಪೆಷಲ್ ಥೀಮ್ನಲ್ಲಿ, ನೆಸ್ಲೆ ಮಿಲ್ಕ್ ಮೇಡ್ ಅವರ ಕಡೆಯಿಂದ, ನಿರ್ವಾಹಕರ ಕೈ ರುಚಿ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದಿದ್ದಾರೆ. ಆಹಾರ ಸ್ನೇಹಿಯಲ್ಲಿ ಪಾಕಪ್ರವೀಣೆ ಹೀಗೆ ಹಲವಾರು ಬಹುಮಾನಗಳು ದಿವ್ಯಾ ಮಹೇಶ್ ಅವರಿಗೆ ಲಭಿಸಿವೆ. ವಿಶೇಷವಾಗಿ ಮಹೇಶ್ ಪುಚ್ಚೆಪಾಡಿ ಅವರ ರೂರಲ್ ವೆಬ್ ಪೇಜ್ನಲ್ಲಿ ಹಲಸಿನಕಾಯಿಯ 50ಕ್ಕೂ ಅಧಿಕ ರೆಸಿಪಿಗಳನ್ನು ನೀಡುತ್ತಾ ಬರುತ್ತಿದ್ದಾರೆ.
ಒಲೆಯ ಮುಂದೆ ನಿಂತು ಸವಿಯಾದ ಅಡುಗೆಯನ್ನು ಸಿದ್ಧಪಡಿಸುವುದು ಕೇವಲ ಹೊಟ್ಟೆಪಾಡಿನ ಕೆಲಸವಲ್ಲ; ಅದೊಂದು ಸೃಜನಶೀಲ ಕಲೆ ಎಂಬುದನ್ನು ದಿವ್ಯ ಮಹೇಶ್ ತಮ್ಮ ಸಾವಿರಕ್ಕೂ ಅಧಿಕ ರೆಸಿಪಿಗಳ ಮೂಲಕ ಜಗತ್ತಿಗೆ ಸಾಬೀತುಪಡಿಸಿದ್ದಾರೆ. ವೇಣೂರಿನ ಈ ಪಾಕ ಪ್ರವೀಣೆಯ ಸೌಂದರ್ಯವಿರುವ ಕೈಚಳಕ ಮತ್ತು ಅಡುಗೆಯ ಮೇಲಿನ ನಿರಂತರ ಒಲವು ಮುಂದಿನ ಪೀಳಿಗೆಯ ಅಡುಗೆ ಪ್ರಿಯರಿಗೆ ಸದಾ ದಾರಿದೀಪ. ಸಾವಿರದ ಗಡಿ ದಾಟಿದ ಈ ಪಯಣ ಇಲ್ಲಿಗೆ ನಿಲ್ಲುವುದಿಲ್ಲ, ಬದಲಿಗೆ ಹೊಸ ಹೊಸ ರುಚಿಗಳ ಲೋಕವನ್ನು ಸೃಷ್ಟಿಸುವ ಇವರ ಈ ಅನನ್ಯ ಸಾಹಸಯಾತ್ರೆ ಸದಾ ನಿರಂತರವಾಗಿರಲಿ ಅನ್ನುವುದೇ ‘ನ್ಯೂಸ್ 19 ಕನ್ನಡ’ ಆಶಯ.
-ಪದ್ಮನಾಭ ಕುಲಾಲ್ ವೇಣೂರು



