ಬಂಟ್ವಾಳ: ಬಂಟ್ವಾಳ ತಾಲೂಕಿನ ಮುರುವ ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಪೂರ್ವಭಾವಿಯಾಗಿ (48 ದಿನಗಳ ಕಾಲ, 1 ಮಂಡಲ) ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆಯು ಜು. 12ರಿಂದ ನಿರಂತರ ನಡೆಯುತ್ತಿದೆ.


ಪ್ರತಿದಿನದ ಪೂಜೆಯಲ್ಲಿ ವಿವಿಧ ಕಡೆಗಳಿಂದ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಪ್ರತಿದಿನ ನಾಗದೇವರ ಪೂಜೆ, ಗೋಮಾತ ಪೂಜೆ, ಬಾಲಭೋಜನ, ಕನಕಧಾರಾ ಯಾಗ, ಸಾಮೂಹಿಕ ಕುಂಕುಮಾರ್ಚನೆ, ಶ್ರೀ ದುರ್ಗಾಪೂಜೆ, ಆಶ್ಲೇಷ ಬಲಿ, ಮಹಾಪೂಜೆ, ವಾಯನದಾನ ಬಳಿಕ ಅನ್ನಪ್ರಸಾದ ಸೇವೆ ನಡೆಯುತ್ತಿದೆ. ಕಳೆದ ೨೬ ವರ್ಷಗಳಿಂದ ನಿರಂತರವಾಗಿ ಶ್ರೀಧಾಮದಲ್ಲಿ ಈ ಪೂಜೆಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತೀ ರವಿವಾರ ವಿಶೇಷ ಪೂಜೆ ಜೊತೆಗೆ ಧಾರ್ಮಿಕ ಸಭೆ ನಡೆಯಲಿದೆ.
ಈ 48 ದಿನಗಳ ಪೂಜಾ ವಿಧಿವಿಧಾನಗಳಲ್ಲಿ ತಮ್ಮನ್ನು ತಾವು ಸಂಪೂರ್ಣ ತೊಡಗಿಸಿಕೊಂಡು ತಾಯಿ ಶ್ರೀ ಮಹಾಲಕ್ಷ್ಮೀಯ ಹಾಗೂ ಜಗದ್ಗುರು ನಿತ್ಯಾನಂದರ ವಿಶೇಷ ಕೃಪೆಗೆ ಪಾತ್ರರಾಗಬಯಸುವ ಭಗವದ್ಭಕ್ತರಿಗೆ ಪೂಜೆಯಲ್ಲಿ ಇಚ್ಛಿತ ಒಂದು ದಿನ’ವನ್ನು ತಮ್ಮದಾಗಿಸಿಕೊಳ್ಳುವ ಸೌಭಾಗ್ಯವನ್ನೂ ಶ್ರೀ ಕ್ಷೇತ್ರವು ಭಕ್ತರಿಗೆ ದಯಪಾಲಿಸಲಿದೆ. ಆದ್ದರಿಂದ ತಾವು ಇಚ್ಛಿತ ಒಂದು ದಿನ ಕುಟುಂಬ ಸಮೇತರಾಗಿ ಶ್ರೀಧಾಮಕ್ಕೆ ಬಂದು ಶ್ರೀ ಲಕ್ಷ್ಮೀ ಪೂಜೆಯನ್ನು ನೆರವೇರಿಸಿ, ಶ್ರೀ ದೇವರ ಕೃಪಾಕಟಾಕ್ಷಕ್ಕೆ ಒಳಗಾಗಬೇಕೆಂಬುದೇ ನಮ್ಮ ಆಶಯ. ತಾಯಿಯ ಸೇವೆ ಮಾಡುವ ಪುಣ್ಯದ ಕಾರ್ಯವು ಸದಾ ತಮ್ಮದಾಗಲಿ, ಶ್ರೀಧಾಮದ ಎಲ್ಲಾ ನಡೆಯಲ್ಲಿ ತಮ್ಮ ಸಹಕಾರ, ಪ್ರೀತಿ ಹೀಗೆಯೇ ಮುಂದುವರಿಯಲಿ. ನಮ್ಮ-ನಿಮ್ಮೆಲ್ಲರನ್ನೂ ಶ್ರೀ ಮಹಾಮಾತೆ ಹರಸಲಿ ಎಂದು ಎಂದು ಶ್ರೀಶ್ರೀಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶಿಸಿದ್ದಾರೆ.
ಶ್ರೀ ವರಮಹಾಲಕ್ಷ್ಮೀ ದೇವಿಯ ವ್ರತಾಚರಣೆ
‘ಶ್ರೀ ವರಮಹಾಲಕ್ಷ್ಮೀ ವ್ರತ’ ಎಂದರೆ ತಾಯಿ ಜಗನ್ಮಾತೆಯನ್ನು ಸ್ತುತಿಸಿ ಒಲಿಸಿಕೊಳ್ಳುವ ಮಹಾನ್ ವ್ರತ. ಆಕೆಯ ವ್ರತಾಚರಿಸಿ, ಭಕ್ತಿಪೂರ್ವಕ ಪೂಜೆಗೈದರೆ ನಮ್ಮೆಲ್ಲಾ ಕಷ್ಟ ಕೋಟಲೆಗಳು ಕರಗಿ ಮಾನಸಿಕ ಸೈಯವನ್ನು, ತುಂಬು ನೆಮ್ಮದಿಯನ್ನು ಖಂಡಿತಾ ಕಾಣಬಹುದು ಎಂಬುದು ಅನುಭವವೇದ್ಯವಾದ ಭಕ್ತರ ಮಾತು. ಅಂತಹ ತಾಯಿ ಜಗನ್ಮಾತೆಯ ದಿವ್ಯಸಾನ್ನಿಧ್ಯ ಇರುವ ಪುಣ್ಯದ ನಾಡು ನಮ್ಮ ಶ್ರೀಧಾಮ ಮಾಣಿಲ. ಈ ಪವಿತ್ರ ಮಣ್ಣಲ್ಲಿ ‘ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ’ಯ ಮೂಲಕ ತಾಯಿ ದೇವಿಯ ಚರಣ ಕಮಲಗಳಲ್ಲಿ ತಲೆಯಿಟ್ಟು ಪ್ರಾರ್ಥಿಸಲು, “ಎನ್ನ ರಕ್ಷಿಸಮ್ಮ ಎಂದು ಆರ್ತರಾಗಿ ಮೊರೆಯಿಡಲು ತಾ. 28-08-2026ರಂದು ಶ್ರೀ ವರಮಹಾಲಕ್ಷ್ಮೀ ದೇವಿಯ ವ್ರತಾಚರಣೆಯನ್ನು ಸಂಕಲಿಸಲಾಗಿದೆ.



