ನವದೆಹಲಿ, ಆ. 4: ಭಾರತದಲ್ಲಿ ಸಾವಿರಾರು ವಾಟ್ಸಾಪ್ ಬಳಕೆದಾರರಿಗೆ ಸೋಮವಾರ ರಾತ್ರಿ ಆಘಾತ ಎದುರಾಗಿದೆ. ಯಾವುದೇ ಪೂರ್ವ ಸೂಚನೆಯಿಲ್ಲದೆ ಏಕಾಏಕಿ ನೂರಾರು ವಾಟ್ಸಾಪ್ ಖಾತೆಗಳನ್ನು 24 ಗಂಟೆಗಳ ಕಾಲ ‘ಪರಿಶೀಲನೆಗೆ’ ಒಳಪಡಿಸಲಾಗಿದ್ದು, ಸಂದೇಶ ರವಾನೆ ಸೇರಿದಂತೆ ಅಪ್ಲಿಕೇಶನ್ನ ಎಲ್ಲಾ ಸೇವೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಸೋಮವಾರ ರಾತ್ರಿ ಸುಮಾರು 8 ಗಂಟೆಯ ಸುಮಾರಿಗೆ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಬಳಕೆದಾರರು ಅಪ್ಲಿಕೇಶನ್ ತೆರೆದಾಗ ನಿಮ್ಮ ಖಾತೆಯು ಪರಿಶೀಲನೆಯಲ್ಲಿದೆ. ಸೇವಾ ನಿಯಮಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲಾಗುತ್ತಿದ್ದು, 24 ಗಂಟೆಗಳಲ್ಲಿ ಫಲಿತಾಂಶ ತಿಳಿಸಲಾಗುವುದು ಎಂಬ ಸಂದೇಶ ಕಂಡುಬಂದಿದೆ.

ದೈನಂದಿನ ಕಚೇರಿ ಕೆಲಸ ಮತ್ತು ವೈಯಕ್ತಿಕ ಸಂವಹನಕ್ಕೆ ವಾಟ್ಸಾಪ್ ಪ್ರಮುಖ ಮಾಧ್ಯಮವಾಗಿರುವುದರಿಂದ, ಖಾತೆಗಳು ಹಠಾತ್ತನೆ ನಿರ್ಬಂಧಗೊಂಡಿದ್ದಕ್ಕೆ ನೆಟ್ಟಿಗರು ಎಕ್ಸ್ (ಟ್ವಿಟರ್) ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಥರ್ಡ್-ಪಾರ್ಟಿ ಆ್ಯಪ್ಗಳನ್ನು ಬಳಸದೆ, ಕೇವಲ ಅಧಿಕೃತ ವಾಟ್ಸಾಪ್ ಆಪ್ ಬಳಸುತ್ತಿದ್ದರೂ ತಮ್ಮ ಖಾತೆಯನ್ನು ಬ್ಯಾನ್ ಮಾಡಲಾಗಿದೆ ಎಂದು ಹಲವು ಬಳಕೆದಾರರು ದೂರಿದ್ದಾರೆ.
ನಮ್ಮ ಸೇವಾ ನಿಯಮಗಳನ್ನು ಉಲ್ಲಂಘಿಸುವ ಹಾಗೂ ಸ್ಪ್ಯಾಮ್ (Spam) ರವಾನಿಸುವ ಖಾತೆಗಳ ವಿರುದ್ಧ ನಾವು ನಿರಂತರವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ಕೆಲವೊಮ್ಮೆ ನಮ್ಮ ಸ್ವಯಂಚಾಲಿತ ಅಲ್ಗಾರಿದಮ್ಗಳಿಂದಾಗಿ (AI Tools) ತಾಂತ್ರಿಕ ದೋಷ ಸಂಭವಿಸಿ, ಸರಿ ಇರುವ ಖಾತೆಗಳೂ ಪರಿಶೀಲನೆಗೆ ಒಳಗಾಗುತ್ತವೆ. ಅಂತಹ ಸಂದರ್ಭಗಳಲ್ಲಿ ನಾವು ಪರಿಶೀಲಿಸಿ, ಸಾಧ್ಯವಾದಷ್ಟು ಬೇಗ ಖಾತೆಗಳನ್ನು ಪುನರಾರಂಭಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.



