ಸಿಎಂ ಡಿಕೆಶಿ ಸಚಿವ ಸಂಪುಟ ವಿಸ್ತರಣೆ ಸಂಬಂಧ ಕೊನೇ ಕ್ಷಣದಲ್ಲಿ ಭಾರಿ ಬೆಳವಣಿಗೆಗಳು ನಡೆದಿವೆ. ಲಿಸ್ಟ್ನಲ್ಲಿ ಹೆಸರಿದ್ದ ಹೊರತಾಗಿಯೂ ಭಟ್ಕಳ ಶಾಸಕ ಮಂಕಾಳು ವೈದ್ಯಗೆ ಸಚಿವ ಸ್ಥಾನ ಕೈತಪ್ಪಿದೆ. ಟೈಪಿಂಗ್ ಮಿಸ್ಟೇಕ್ನಿಂದ ಅವರ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಬಗ್ಗೆ ಎಐಸಿಸಿ ಸ್ಪಷ್ಟನೆ ನೀಡಿದ್ದು, ಅವರ ಬದಲಿಗೆ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕರಾಗಿರುವ ಎಸ್.ಎಸ್. ಮಲ್ಲಿಕಾರ್ಜುನಗೆ ಸ್ಥಾನ ನೀಡಲಾಗಿದೆ.

ಡಿಕೆಶಿ ಜೊತೆ ಮಾತುಕತೆ ಯತ್ನ
ಸಚಿವಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಸಿಎಂ ನಿವಾಸಕ್ಕೆ ಮಂಕಾಳು ವೈದ್ಯ ಭೇಟಿ ನೀಡಿದ್ದಾರೆ. ಕೊನೇ ಕ್ಷಣದ ನಿರ್ಧಾರದ ಸಂಬಂಧ ಮುಖ್ಯಮಂತ್ರಿಗಳ ಜೊತೆ ಚರ್ಚೆಗೆ ಅವರು ಆಗಮಿಸಿದ್ದರಾದರೂ ಡಿಕೆಶಿ ಜೊತೆ ಮಾತುಕತೆ ಸಾಧ್ಯವಾಗಿಲ್ಲ ಎನ್ನಲಾಗಿದೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಕಾಂಗ್ರೆಸ್ ಶಾಸಕ ಪ್ರತಿಕ್ರಿಯೆ ನೀಡಿದ್ದು, ನಾನು ಸಿಎಂ ಅವರನ್ನ ಭೇಟಿ ಆಗಿಲ್ಲ, ಅವರು ಸಿಕ್ಕಿಲ್ಲ. ಮತ್ತೊಮ್ಮೆ ಬರುತ್ತೇನೆ ಎಂದಷ್ಟೇ ಹೇಳಿ ಸಿಎಂ ಮನೆಯಿಂದ ಸಿಟ್ಟಲ್ಲೇ ಹೊರಟ ಪ್ರಸಂಗ ನಡೆದಿದೆ.



