ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ತಮ್ಮ ಹಾಗೂ ತಮ್ಮ ದಿವಂಗತ ತಾಯಿಯ ವಿರುದ್ಧ ಅತ್ಯಂತ ಅವಹೇಳನಕಾರಿ ಮಾತುಗಳನ್ನಾಡಿದ ವಿದ್ಯಾರ್ಥಿಗಳನ್ನ ಕ್ಷಮಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ವಿಡಿಯೋ ಸಂದೇಶ ಹಂಚಿಕೊಂಡಿರುವ ಅವರು, ವಿದ್ಯಾರ್ಥಿಗಳನ್ನ “ದಾರಿತಪ್ಪಿದ ಮಕ್ಕಳು” ಎಂದು ಕರೆದಿದ್ದು, ಅವರಿಗೆ ಶಿಕ್ಷೆ ಅಥವಾ ಕಾನೂನು ಕ್ರಮಗಳಿಗಿಂತ ಸರಿಯಾದ ಮಾರ್ಗದರ್ಶನದ ಅಗತ್ಯವಿದೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಇನ್ಸ್ಟಾಗ್ರಾಮ್ ವಿಡಿಯೋ ಸಂದೇಶ
ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ವಿಡಿಯೋವೊಂದರಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಜಂತರ್ ಮಂತರ್ನಲ್ಲಿ ನಡೆದ ಘಟನೆಯನ್ನ ಇಡೀ ದೇಶ ಮತ್ತು ಪ್ರಪಂಚ ನೋಡಿದೆ. ಕೆಲವು ತುಂಟ ಮಕ್ಕಳು ನಾಗರಿಕ ಸಮಾಜಕ್ಕೆ ಶೋಭೆ ತರದಂತಹ ಅತ್ಯಂತ ಕೆಟ್ಟ ಭಾಷೆಯನ್ನ ಬಳಸಿದ್ದಾರೆ. ನನ್ನನ್ನು ಮಾತ್ರವಲ್ಲದೆ, ನನ್ನ ದಿವಂಗತ ತಾಯಿಯನ್ನೂ ಕೂಡ ನಿಂದಿಸಿದ್ದಾರೆ. ಆದರೆ, ಚಿಕ್ಕ ವಯಸ್ಸಿನಲ್ಲಿ ಮಕ್ಕಳು ತಪ್ಪುಗಳನ್ನ ಮಾಡುವುದು ಸಹಜ. ಆ ತಪ್ಪುಗಳನ್ನು ತಿದ್ದಿಕೊಳ್ಳಲು ಬಾಲ್ಯ ಹಾಗೂ ಯೌವನವೇ ಸೂಕ್ತ ಸಮಯ,” ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳಿಗೆ ಶಿಕ್ಷೆಯಲ್ಲ, ಮಾರ್ಗದರ್ಶನ ಬೇಕು
ವಿದ್ಯಾರ್ಥಿನಿಯರು ಇಂತಹ ಭಾಷೆ ಬಳಸಿರುವುದು ಸಮಾಜದಲ್ಲಿ ಸಹಜವಾಗಿಯೇ ಆಕ್ರೋಶಕ್ಕೆ ಕಾರಣವಾಗಿದೆ ಎಂಬುದನ್ನ ನಾನು ಅರ್ಥಮಾಡಿಕೊಳ್ಳಬಲ್ಲೆ ಎಂದು ಪ್ರಧಾನಿ ಹೇಳಿದರು. ಆದರೆ, “ಇವರು ನಮ್ಮದೇ ದಾರಿತಪ್ಪಿದ ಮಕ್ಕಳು, ಅವರಿಗೆ ಸರಿಯಾದ ದಾರಿ ತೋರಿಸುವುದು ನಮ್ಮ ಕರ್ತವ್ಯ. ಅವರನ್ನ ನ್ಯಾಯಾಲಯಗಳಿಗೆ ಅಲೆದಾಡಿಸುವುದರಿಂದ, ಶಿಕ್ಷಿಸುವುದರಿಂದ ಅಥವಾ ಸಮಾಜದಲ್ಲಿ ಕಿರುಕುಳ ನೀಡುವುದರಿಂದ ಪರಿಸ್ಥಿತಿ ಬದಲಾಯಿಸಲು ಸಾಧ್ಯವಿಲ್ಲ. ನಾನು ಅವರನ್ನ ಕ್ಷಮಿಸಲು ಬಯಸುತ್ತೇನೆ ಮತ್ತು ಸಮಾಜವೂ ನನ್ನ ನಿರ್ಧಾರವನ್ನ ಒಪ್ಪಿಕೊಳ್ಳಬೇಕು ಎಂದು ವಿನಂತಿಸುತ್ತೇನೆ,” ಎಂದಿದ್ದಾರೆ.
ಹಲ್ಲು ಮತ್ತು ನಾಲಿಗೆಯ ಸ್ವಾರಸ್ಯಕರ ಉದಾಹರಣೆ
ತಮ್ಮ ಮಾತಿನ ನಡುವೆ ಸುಂದರವಾದ ಉದಾಹರಣೆಯೊಂದನ್ನು ನೀಡಿದ ಪ್ರಧಾನಿ ಮೋದಿ, “ಕೆಲವೊಮ್ಮೆ ನಮ್ಮ ಹಲ್ಲುಗಳ ನಡುವೆ ನಾಲಿಗೆ ಸಿಲುಕಿ ರಕ್ತ ಬರುತ್ತದೆ. ಹಾಗಂತ ನಾವು ನಮ್ಮ ಹಲ್ಲುಗಳನ್ನ ಮುರಿದುಕೊಳ್ಳುವುದಿಲ್ಲ. ಏಕೆಂದರೆ ಹಲ್ಲೂ ನಮ್ಮದೇ, ನಾಲಿಗೆಯೂ ನಮ್ಮದೇ. ಅದೇ ರೀತಿ ಈ ಮಕ್ಕಳು ಕೂಡ ನಮ್ಮವರೇ. ಅವರು ಮಾಡಿದ ತಪ್ಪಿಗೆ ಅವರನ್ನ ಕೈಬಿಡಬಾರದು,” ಎಂದು ಹೇಳುವ ಮೂಲಕ ಮೋದಿ ಎಲ್ಲರ ಗಮನ ಸೆಳೆದಿದ್ದಾರೆ.
ದೆಹಲಿ ಪೊಲೀಸರಿಂದ ಜೀರೋ ಎಫ್ಐಆರ್ ತನಿಖೆ
ಇತ್ತೀಚೆಗೆ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಮಹಿಳೆಯೊಬ್ಬರು ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದ ವಿಡಿಯೋ ವೈರಲ್ ಆಗಿತ್ತು. ಈ ಸಂಬಂಧ ಜುಲೈ 29 ರಂದು ನೋಯ್ಡಾದಲ್ಲಿ ದಾಖಲಾಗಿದ್ದ ‘ಜೀರೋ ಎಫ್ಐಆರ್’ಅನ್ನು ಶುಕ್ರವಾರ ದೆಹಲಿ ಪೊಲೀಸರಿಗೆ ವರ್ಗಾಯಿಸಲಾಗಿದೆ. ಈ ಘಟನೆ ದೆಹಲಿ ವ್ಯಾಪ್ತಿಯಲ್ಲಿ ನಡೆದಿರುವುದರಿಂದ, ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯು ಎಫ್ಐಆರ್ ಅಂಶಗಳನ್ನ ಪರಿಶೀಲಿಸಿ ಮುಂದಿನ ಕಾನೂನು ಕ್ರಮದ ಬಗ್ಗೆ ನಿರ್ಧರಿಸಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆದರೆ, ಪ್ರಧಾನಿ ಮೋದಿಯವರು ವಿದ್ಯಾರ್ಥಿಗಳನ್ನ ಕ್ಷಮಿಸುವ ಹಾಗೂ ಅವರನ್ನ ರಾಷ್ಟ್ರ ನಿರ್ಮಾಣದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಕರೆ ನೀಡುವ ಮೂಲಕ, ಈ ವಿವಾದಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ. “ಮಕ್ಕಳೇ, ಬನ್ನಿ… ನಾವೆಲ್ಲರೂ ದೇಶಕ್ಕಾಗಿ ಒಟ್ಟಾಗಿ ಮುನ್ನಡೆಯೋಣ, ತಪ್ಪಿನಿಂದಲೂ ಪಾಠ ಕಲಿಯೋಣ,” ಎಂದು ಪ್ರಧಾನಿ ಯುವಜನತೆಗೆ ಕರೆ ನೀಡಿದ್ದಾರೆ.



